ಆನ್ಲೈನ್ನಲ್ಲಿ ಒಂದನ್ನು ಆರ್ಡರ್ ಮಾಡಿದರೆ ಇನ್ನೊಂದು ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಆರ್ಡರ್ ಮಾಡಿದ್ದು, ಪುಸ್ತಕವಾಗಿದ್ದರೆ, ಪುಸ್ತಕವೇ ಬಂದಿದೆ. ಆದರೆ ಬಂದದ್ದು ಮಾತ್ರ ಆರ್ಡರ್ ಮಾಡಿದ ಪುಸ್ತಕವಲ್ಲ, ಇದರ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಾಶಿಶ್ ಎನ್ನುವವರು ಅಮೆಜಾನ್‌ನಲ್ಲಿ ಪುಸ್ತಕಕ್ಕಾಗಿ ಆರ್ಡರ್ ಮಾಡಿದ್ದರು. ಅವರಿಗೆ ಬಂದದ್ದು ‘ಲುಕಿಂಗ್ ಫಾರ್ ಲಡ್ಡೂ’ ಎಂಬ ಪುಸ್ತಕ! ನನಗೆ ಲಡ್ಡು ಬೇಡ ಸರ್…… ನಾನು ಹೇಳಿದ ಪುಸ್ತಕ ಕಳುಹಿಸಿ ಎಂದು ಕಾಶಿಶ್ ಅವರು ಅಮೆಜಾನ್‌ನಲ್ಲಿ ದೂರು ದಾಖಲಿಸಿದ್ದಾರೆ. ನಂತರ ಸಂಸ್ಥೆಯು ಅವರಿಗೆ ಕ್ಷಮೆಯಾಚಿಸಿದೆ. ನೀವು ಆರ್ಡರ್ ಮಾಡಿದ ಪುಸ್ತಕ ನಮ್ಮ ಬಳಿ ಇದೆ. ಆದರೆ ಅದು ಓಲ್ಡ್ ಸ್ಟಾಕ್ ಆಗಿದೆ. ನಿಮಗೆ ಹೊಸತನ್ನು ಕಳಿಸುತ್ತೇವೆ ಎಂದಿದೆ.
ಇದನ್ನು ನೋಡಿ ಟ್ವಿಟರ್ ಬಳಕೆದಾರರು ಥರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ‘ಲುಕಿಂಗ್ ಫಾರ್ ಲಡ್ಡೂ’ ಲೇಖಕಿ ಅಪರ್ಣಾ ಕಾರ್ತಿಕೇಯನ್ ಕೂಡ ಧ್ವನಿಗೂಡಿಸಿದ್ದಾರೆ. “ಆಹ್, ನಿಮಗೆ ಬೇಕಾದದ್ದು ಸಿಗದಿದ್ದಾಗ ನಿಮಗೆ ಲಡ್ಡು ಬೇಕು ಎಂದು ಅಮೆಜಾನ್ ಭಾವಿಸಿರಬೇಕು ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.