ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಗ್ರಾಮಸ್ಥರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಇತ್ತೀಚೆಗೆ ಜಮಗುಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಬೆನ್ನಲ್ಲೇ ಇದೀಗ ಮತ್ತೆ ಕೆಲ ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದಾರೆ.
ಸಿದ್ದಾಪುರ ತಾಲುಕಿನ ಕಾನೂರು, ಶ್ರೀನಿವಾಸಜಡ್ಡಿ, ಹೊಸಕೊಪ್ಪ ಗ್ರಾಮದ ಜನರು ರಾಜಕಾರಣಿಗಳಿಗೆ ನಮ್ಮ ಊರಿಗೆ ಪ್ರವೇಶವಿಲ್ಲ ಎಂದು ನಾಮಫಲಕಗಳನ್ನು ಹಾಕಿದ್ದು, ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಳ್ಳ ದಾಟಲು ತೂಗು ಸೇತುವೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದೆವು. ಕಳೆದ 10 ವರ್ಷಗಳಿಂದ ಮನವಿ ಮಾಡಿದರೂ ಯಾವೊಬ್ಬ ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದು ಜನರ ಓಡಾಟಕ್ಕೆ ಪರದಾಡುವ ಸ್ಥಿತಿಯಿದೆ. ಆದರೂ ಜನರ ಸಂಕಷ್ಟಕ್ಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.