ಉದ್ಯಮಿ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಸಿರಿವಂತರಲ್ಲೊಬ್ಬರು. ಅಂದ್ಮೇಲೆ ಸಹಜವಾಗಿಯೇ ಅಂಬಾನಿ ಅವರ ಮನೆ ಕೂಡ ಐಷಾರಾಮಿಯಾಗಿದೆ. ಆದರೆ ಈ ಮನೆಯ ವೈಭೋಗ ನಿಜಕ್ಕೂ ಜನಸಾಮಾನ್ಯರನ್ನು ದಂಗಾಗಿಸುವಂತಿದೆ. ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ನಿವಾಸ ಆಂಟಿಲಿಯಾ ಸ್ವರ್ಗಕ್ಕಿಂತ ಕಡಿಮೆಯೇನಿಲ್ಲ. ಭಾರತದ ಅತ್ಯಂತ ಪ್ರಸಿದ್ಧ ಮತ್ತು ದುಬಾರಿ ಮನೆ ಇದು. ಅಷ್ಟೇ ಅಲ್ಲ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆ ಎನಿಸಿಕೊಂಡಿದೆ. ಬಕಿಂಗ್‌ಹ್ಯಾಮ್ ಪ್ಯಾಲೇಸ್ ಬಿಟ್ಟರೆ ಅತಿ ಹೆಚ್ಚು ಬೆಲೆಬಾಳುವ ಮನೆ ಆಂಟಿಲಿಯಾ.
ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿ ಮುಖೇಶ್ ಅಂಬಾನಿ ಅವರ ನಿವಾಸವಿದೆ. ಇದರ ವಿಸ್ತಾರ ಸುಮಾರು 4,532 ಚದರ ಮೀಟರ್‌ಗಳಷ್ಟಿದೆ. ಅಟ್ಲಾಂಟಿಕ್ ಸಾಗರದಲ್ಲಿರುವ ಫ್ಯಾಂಟಮ್ ದ್ವೀಪದ ಹೆಸರಲ್ಲಿ ಅಂಬಾನಿ ನಿವಾಸಕ್ಕೆ ಆಂಟಿಲಿಯಾ ಎಂದು ನಾಮಕರಣ ಮಾಡಲಾಗಿದೆ. ಆಂಟಿಲಿಯಾ ದಕ್ಷಿಣ ಮುಂಬೈನ ಹೃದಯ ಭಾಗದಲ್ಲಿದೆ. 27 ಮಹಡಿಗಳ ಬೃಹತ್ ಕಟ್ಟಡ ಇದು. ಇಲ್ಲಿ ಸುಮಾರು 600 ಸಿಬ್ಬಂದಿ ಕೆಲಸ ಮಾಡ್ತಾರೆ. ಮನೆಯಲ್ಲಿ ಮೂರು ಹೆಲಿಪ್ಯಾಡ್, ಮುಂಬೈ ಮತ್ತು ಅರೇಬಿಯನ್ ಸಮುದ್ರದ ಸ್ಕೈಲೈನ್‌ಗಳನ್ನು ಹೊಂದಿದೆ.
ಆಂಟಿಲಿಯಾದ ನಿರ್ಮಾಣಕ್ಕೆ ಸುಮಾರು ಎರಡು ವರ್ಷಗಳೇ ಬೇಕಾಯ್ತು. 2008ರಲ್ಲಿ ಕಾಮಗಾರಿ ಪ್ರಾರಂಭವಾಗಿ 2010ರಲ್ಲಿ ಪೂರ್ಣಗೊಂಡಿತು. ಈ ಮನೆಯಲ್ಲಿ ಪ್ರತ್ಯೇಕ ಮನರಂಜನಾ ಸ್ಥಳ, ಭವ್ಯವಾದ ಪ್ರವೇಶ ದ್ವಾರ, ವಿಶಾಲವಾದ ಕೋಣೆಗಳು, 6 ಅಂತಸ್ತಿನ ಕಾರ್ ಪಾರ್ಕಿಂಗ್ ಹೀಗೆ ತರಹೇವಾರಿ ಸೌಲಭ್ಯಗಳಿವೆ. ಯೋಗ ಕೇಂದ್ರ, ಡಾನ್ಸ್ ಸ್ಟುಡಿಯೋ, ಹೆಲ್ತ್ ಸ್ಪಾ ಮತ್ತು ಈಜುಕೊಳವನ್ನು ಸಹ ಹೊಂದಿದೆ.
ಈ ಮೊದಲು ಮುಂಬೈನ ಸೀ ವಿಂಡ್‌ನಲ್ಲಿರುವ 14 ಅಂತಸ್ತಿನ ಮನೆಯಲ್ಲಿ ಅಂಬಾನಿ ಕುಟುಂಬ ವಾಸವಾಗಿತ್ತು. ಬಳಿಕ ಆಂಟಿಲಿಯಾ ನಿವಾಸಕ್ಕೆ ಶಿಫ್ಟ್ ಆಗಿದೆ. ಆಸ್ಟ್ರೇಲಿಯನ್ ಮೂಲದ ಕಂಪನಿ ಲೈಟನ್ ಹೋಲ್ಡಿಂಗ್ಸ್ ಮನೆಯನ್ನು ವಿನ್ಯಾಸಗೊಳಿಸಿದೆ. ಆಂಟಿಲಿಯಾ ನಿರ್ಮಾಣಕ್ಕೆ ಸುಮಾರು 6,000-12,000 ಕೋಟಿ ರೂಪಾಯಿ ವೆಚ್ಚವಾಗಿದೆ. ಬೃಹತ್ ಕಟ್ಟಡವಾಗಿದ್ದರಿಂದ 9 ಲಿಫ್ಟ್‌ಗಳನ್ನೂ ಅಳವಡಿಸಲಾಗಿದೆ.