ಜೈಲಿನಲ್ಲಿರುವ ಕೈದಿಗಳು ಅಲ್ಲಿಂದಲೇ ತಮ್ಮ ಕುಕೃತ್ಯಗಳನ್ನು ಮುಂದುವರಿಸಬಹುದು ಎಂಬ ಕಾರಣಕ್ಕೆ ಪೊಲೀಸರು ಆಗಾಗ ದಾಳಿ ನಡೆಸಿ ತಪಾಸಣೆ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮೊಬೈಲ್, ಮಾದಕ ದ್ರವ್ಯ ಮೊದಲಾದವುಗಳು ಸಿಗುತ್ತಲೇ ಇರುತ್ತವೆ.
ಹೀಗೆ ತಪಾಸಣೆ ನಡೆಸುವ ವೇಳೆ ತಾನು ಮೊಬೈಲ್ ಸಮೇತ ಸಿಕ್ಕು ಬೀಳುತ್ತೇನೆ ಎಂಬ ಭಯದಿಂದ ಕೈದಿಯೊಬ್ಬ ಮೊಬೈಲ್ ನುಂಗಿರುವ ವಿಲಕ್ಷಣ ಘಟನೆ ಬಿಹಾರದ ಗೋಪಾಲ್ ಗಂಜ್ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ಅಡಿ 2020 ರ ಜನವರಿ 17ರಂದು ಬಂಧನಕ್ಕೊಳಗಾಗಿದ್ದ ಕೈಷರ್ ಆಲಿ ಈಗ ಗೋಪಾಲ್ ಗಂಜ್ ಜೈಲಿನಲ್ಲಿದ್ದಾನೆ. ಇತ್ತೀಚೆಗೆ ಎಂದಿನಂತೆ ಪೊಲೀಸರು ತಪಾಸಣೆ ನಡೆಸುವ ವೇಳೆ ಆತ ಸಿಕ್ಕಿ ಬೀಳುವ ಭಯಕ್ಕೆ ಮೊಬೈಲ್ ನುಂಗಿದ್ದಾನೆ.
ಆದರೆ ಆ ಬಳಿಕ ಆತನಿಗೆ ತೀವ್ರ ಹೊಟ್ಟೆ ನೋವು ಕಾಡತೊಡಗಿದ್ದು ವೈದ್ಯರು ಪರೀಕ್ಷಿಸಿದಾಗ ನಿಜ ಸಂಗತಿ ಬಾಯಿಬಿಟ್ಟಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿ ಎಕ್ಸ್ ರೇ ಮಾಡಿದ ವೇಳೆ ಉದರದಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.