ಉಡುಪಿ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಈ ಬಾರಿ ಮಾತಿನ ಎಲ್ಲೆ ಮೀರಿದ್ದು, ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಹೆಣಕ್ಕೆ ಹೋಲಿಕೆ ಮಾಡಿದ್ದಾರೆ.
ಉಡುಪಿಯಲ್ಲಿ ನಡೆದ ಜಿಲ್ಲಾ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿ.ಟಿ.ರವಿ, ಸಿದ್ದರಾಮಯ್ಯ ನಾನು ಹಿಂದು ಅಂತಾರೆ, ಆದರೆ ಹಿಂದುತ್ವವಾದಿಯಲ್ಲ ಅಂತಾರೆ. ಹಿಂದೂ ಅನ್ನುವುದು ದೇಹವಿದ್ದಂತೆ, ಹಿಂದುತ್ವ ಎನ್ನುವುದು ಜೀವವಿದ್ದಂತೆ. ದೇಹದಿಂದ ಜೀವ ಹೋದರೆ ಅವರು ಹೆಣಕ್ಕೆ ಸಮ ಎಂದು ವಾಗ್ದಾಳಿ ನಡಿಸಿದ್ದಾರೆ.
ಜೀವ ಇಲ್ಲದ ಕಾಂಗ್ರೆಸ್ ಪಕ್ಷವನ್ನು ಬಹಳ ಹೊತ್ತು ಇಟ್ಟುಕೊಳ್ಳಬಾರದು. ವಿಧಿವಿಧಾನ ಮಾಡಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಬೇಕು. ಅಂದರೆ ಕಾಂಗ್ರೆಸ್ ನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸಬೇಕು ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.