ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿಎಸ್ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದೇನೆ ಎಂದು ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಸ್ ವಂದಿತಾ ಶರ್ಮಾ ಭೇಟಿಯಾದ ರೋಹಿಣಿ ಸಿಂಧೂರಿ, ಮೂರು ಪುಟಗಳ ದೂರು ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂಬ ನಿಯಮವಿದೆ. ಡಿ.ರೂಪಾ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಕಾರ್ಯದರ್ಶಿಗಳಿಗೆ ದೂರು ನೀಡಿದ್ದೇನೆ. ಡಿ.ರೂಪಾ ಅವರ ಕಾರ್ಯವ್ಯಾಪ್ತಿಯೇ ಬೇರೆ, ನಮ್ಮ ಕಾರ್ಯವ್ಯಾಪ್ತಿಯೇ ಬೇರೆ. ನನಗೂ ಡಿ.ರೂಪಾ ಅವರಿಗೂ ಯಾವುದೇ ಸಂಬಂಧವಿಲ್ಲ, ಯಾಕೆ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ ಎಂದರು.
ನಾನು ಮೂವರು ಐ ಎ ಎಸ್ ಅಧಿಕಾರಿಗಳಿಗೆ ಫೋಟೋ, ಮೆಸೆಜ್ ಕಳುಹಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ಯಾರಿಗೆ ಕಳುಹಿಸಿದ್ದೇನೆ ಎಂದು ಹೇಳಲಿ, ಆ ಮೂವರ ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ನಾನು ಯಾವುದೇ ಸೋಷಿಯಲ್ ಮೀಡಿಯಾ, ಟ್ವೀಟರ್, ಫೇಸ್ ಬುಕ್ ನಲ್ಲಿ ಆಕ್ಟೀವ್ ಆಗಿಲ್ಲ. ಡಿ.ರೂಪಾ ನನ್ನ ವಿರುದ್ಧ ಮಾತನಾಡಿರುವ ಬಗ್ಗೆ ಸಿಎಸ್ ಅವರಿಗೆ ದೂರು ನೀಡಿದ್ದೇನೆ. ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.