ಸದ್ಯ ಜಗತ್ತಿನಾದ್ಯಂತ ಬೊಜ್ಜಿನ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ತೂಕ ಇಳಿಸುವುದೇ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆ ಮಾಡಿಕೊಳ್ಳುವುದು ಅಸಾಧ್ಯವೆನಿಸುತ್ತದೆ. ಕೆಲವರು ತೂಕವನ್ನು ನಿಯಂತ್ರಿಸಲು ಮೊಟ್ಟೆ ಮತ್ತು ಪನೀರ್ ಸೇವನೆ ಮಾಡುತ್ತಾರೆ. ಇವೆರಡರಲ್ಲೂ ಕ್ಯಾಲೋರಿ ಕಡಿಮೆ ಮತ್ತು ಹೆಚ್ಚಿನ ಪ್ರೋಟೀನ್ ಇರುತ್ತದೆ.
ಪ್ರೋಟೀನ್ ತಡವಾಗಿ ಜೀರ್ಣವಾದಾಗ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರ ಹೊರತಾಗಿ ಈ ಎರಡೂ ವಸ್ತುಗಳು ಹಸಿವನ್ನು ಕಡಿಮೆ ಮಾಡುವ ಹಾರ್ಮೋನುಗಳನ್ನು ಹೆಚ್ಚಿಸುತ್ತವೆ. ಪನೀರ್ ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿನ್ನುವುದರಿಂದ ದೇಹಕ್ಕೆ ಏನಾದರೂ ಪ್ರಯೋಜನವಿದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಬಹುತೇಕರಲ್ಲಿದೆ.
ಮೊಟ್ಟೆ ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ?
ಮೊಟ್ಟೆಯು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಆಹಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮೊಟ್ಟೆ ತಿನ್ನುವುದರಿಂದ ನಮ್ಮ ದೇಹದಲ್ಲಿನ ಅಗತ್ಯ ಅಮೈನೋ ಆಮ್ಲಗಳ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಮೊಟ್ಟೆ ನಮ್ಮ ಚಯಾಪಚಯವನ್ನು ಹೆಚ್ಚಿಸುವ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಸೊಂಟ ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಪನೀರ್ ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ?
ಪನೀರ್ ನಮಗೆ ತ್ವರಿತ ಶಕ್ತಿಯ ಮೂಲವಾಗಿದೆ. ಇದರಿಂದ ನಾವು ದೈನಂದಿನ ಜೀವನದ ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದು. ಆದರೆ ಪನೀರ್ನ ಅನೇಕ ರುಚಿಕರವಾದ ವಸ್ತುಗಳು ವಾಸ್ತವವಾಗಿ ತೂಕವನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಎಣ್ಣೆ ಮತ್ತು ಮಸಾಲೆಗಳನ್ನು ಬಳಸುವ ಪಾಕವಿಧಾನಗಳಿಂದ ನಾವು ದೂರವಿರಬೇಕು. ತೂಕ ಇಳಿಸಿಕೊಳ್ಳಲು ಬಯಸುವವರು ಪನೀರ್ ಟಿಕ್ಕಾದಂತಹ ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳಬೇಕು. ಆದರೆ ಒಂದೇ ದಿನ ಅತಿಯಾಗಿ ಪನೀರ್ ತಿನ್ನುವುದನ್ನು ತಪ್ಪಿಸಿ. ಜಾಸ್ತಿ ಸೇವನೆ ಮಾಡಿದರೆ ಅದು ಪ್ರಯೋಜನಗಳ ಬದಲಿಗೆ ಹಾನಿಯನ್ನು ಉಂಟುಮಾಡಬಹುದು.
ಪನೀರ್ ಮತ್ತು ಮೊಟ್ಟೆಗಳನ್ನು ಒಟ್ಟಿಗೆ ತಿನ್ನುವುದು ಪ್ರಯೋಜನಕಾರಿಯೇ?
ಪ್ರೋಟೀನ್ ಭರಿತ ಮೊಟ್ಟೆಗಳು ಮತ್ತು ಪನೀರ್ ತೂಕವನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಬಹಳ ಮುಖ್ಯ. ತೂಕ ಇಳಿಸಿಕೊಳ್ಳಲು ಇವೆರಡೂ ಸರಿಯಾದ ಆಯ್ಕೆ. ಪ್ರೋಟೀನ್ ನಿಧಾನವಾಗಿ ಜೀರ್ಣವಾಗುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಮೊಟ್ಟೆ ಮತ್ತು ಪನೀರ್ ಅನ್ನು ಒಟ್ಟಿಗೆ ತಿಂದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಮಿತವಾಗಿ ಸೇವನೆ ಮಾಡಿ, ಅತಿಯಾಗಿ ತಿಂದರೆ ಬೇರೆ ಸಮಸ್ಯೆಗಳಾಗುತ್ತವೆ.