ಬೆಂಗಳೂರು: ಮ್ಯಾನ್ ಹೋಲ್ ಶುಚಿಗೊಳಿಸುವಾಗ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದುಕೊಂಡ ಗ್ರಾಮ ಪಂಚಾಯಿತಿಗೆ ಹೈಕೋರ್ಟ್ ಏಕ ಸದಸ್ಯ ಪೀಠ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮೃತನ ಪತ್ನಿಗೆ ಮನೆ ಸಹಿತ ನಿವೇಶನವನ್ನು ಹೈಕೋರ್ಟ್ ಕೊಡಿಸಿದೆ. 2011 ರಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ. ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಕಾರ್ಮಿಕ ನರಸಿಂಹಯ್ಯ ಮೃತಪಟ್ಟಿದ್ದರು. ಯಲಹಂಕದಲ್ಲಿ ಘಟನೆ ನಡೆದಿತ್ತು. ಹೈಕೋರ್ಟ್ ಆದೇಶದ ಬಳಿಕ ಮೃತನ ಪತ್ನಿಗೆ ನಿವೇಶನ ನೀಡಲಾಗಿತ್ತು. ಆದರೆ, ಮನೆ ಕಟ್ಟಿಲ್ಲವೆಂದು ಗ್ರಾಮ ಪಂಚಾಯಿತಿ ಹಂಚಿಕೆಯನ್ನು ರದ್ದುಪಡಿಸಿತ್ತು.
ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಕ್ರಮ ಪ್ರಶ್ನಿಸಿ ಮೃತ ಕಾರ್ಮಿಕ ನರಸಿಂಹಯ್ಯನವರ ಪತ್ನಿ ನಾಗಮ್ಮ ಅರ್ಜಿ ಸಲ್ಲಿಸಿದ್ದರು. ಪಂಚಾಯಿತಿ ಪಿಡಿಓ ಕ್ರಮಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ.ಡಬ್ಲ್ಯೂ.ಎಸ್.ಎಸ್.ಬಿ. ನಿರ್ಲಕ್ಷದಿಂದ ನರಸಿಂಹಯ್ಯ ಮೃತಪಟ್ಟಿದ್ದಾರೆ. ಬಡ ಮಹಿಳೆಯ ಬಗ್ಗೆ ಪಂಚಾಯಿತಿ ಧೋರಣೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಹೈಕೋರ್ಟ್ ತರಾಟೆಯ ನಂತರ ಪಂಚಾಯಿತಿ ಮನೆ ಸಹಿತ ನಿವೇಶನ ನೀಡಿದೆ. ಮೃತರ ಪತ್ನಿ ದಂಡದ ಹಣ ನೀಡಲು ಗ್ರಾಮ ಪಂಚಾಯಿತಿಗೆ ಸೂಚನೆ ನೀಡಲಾಗಿದೆ. ಕಾಯ್ದೆಯಡಿ ಲಭ್ಯವಿರುವ ಸೌಲಭ್ಯ ಒದಗಿಸಲು ಹೈಕೋರ್ಟ್ ಆದೇಶ ನೀಡಿದೆ.