ಉಪಯುಕ್ತ ಮಾಹಿತಿಗಳನ್ನು ಹುಡುಕಲು ಗೂಗಲ್ ಸರ್ಚ್ ಎಂಜಿನ್ ಬಳಸಲಾಗುತ್ತದೆ. ಆದರೆ ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಆದರೆ ಇದು ಅಮೆರಿಕಾ ಏಜೆನ್ಸಿ ಗಮನಕ್ಕೆ ಬಂದ ಕೂಡಲೇ ಆ ವ್ಯಕ್ತಿಯ ಪ್ರಾಣ ಉಳಿಯಲು ಕಾರಣವಾಗಿದೆ.
ಪ್ರಕರಣದ ವಿವರ: ಖಾಸಗಿ ಐಟಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಮುಂಬೈನ 25 ವರ್ಷದ ವ್ಯಕ್ತಿಯೊಬ್ಬ ನೋವಿಲ್ಲದಂತೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂಬ ವಿಚಾರವನ್ನು ಗೂಗಲ್ ನಲ್ಲಿ ಹುಡುಕುತ್ತಿದ್ದ. ಇದು ಅಮೆರಿಕಾದ ಏಜೆನ್ಸಿ ಗಮನಕ್ಕೆ ಬಂದಿದ್ದು ಅವರು ಕೂಡಲೇ ಇಂಟರ್ ಪೋಲ್ ಮೂಲಕ ಮುಂಬೈ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಯುವಕನ ಐಪಿ ಅಡ್ರೆಸ್ ಮೂಲಕ ಈತ ಜೋಗೇಶ್ವರಿ ಏರಿಯಾದ ನಿವಾಸಿ ಎಂಬುದು ತಿಳಿದು ಬಂದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನ ಆತ್ಮಹತ್ಯೆ ನಿರ್ಧಾರಕ್ಕೆ ತಡೆ ಹಾಕಿದ್ದಾರೆ. ಠಾಣೆಗೆ ಕರೆತಂದು ಆತನಿಗೆ ಕೌನ್ಸೆಲಿಂಗ್ ಕೂಡ ಮಾಡಿಸಲಾಗಿದೆ.
ಹಲವರ ಬಳಿ ಸಾಲ ಮಾಡಿಕೊಂಡಿದ್ದ ಈತ, ಹೋಂ ಲೋನ್ ಸಹ ಕಟ್ಟಲಾಗದೆ ಪರದಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆಯೂ ಎರಡು ಮೂರು ಬಾರಿ ಈತ ಆತ್ಮಹತ್ಯೆ ಪ್ರಯತ್ನ ನಡೆಸಿದ್ದು, ಹೀಗಾಗಿ ನೋವಿಲ್ಲದಂತೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂಬ ವಿಷಯವನ್ನು ಹುಡುಕಿದ್ದಾನೆ.
ಆದರೆ ಅದೃಷ್ಟವಶಾತ್ ಈ ವಿಚಾರ ಅಮೆರಿಕಾ ಏಜೆನ್ಸಿ ಗಮನಕ್ಕೆ ಬಂದ ಕಾರಣ ಆತನ ಪ್ರಯತ್ನ ವಿಫಲವಾಗಿದೆ. ಯುವಕನಿಗೆ ಕೌನ್ಸೆಲಿಂಗ್ ಮಾಡಿಸಿರುವ ಪೊಲೀಸರು ಪೋಷಕರ ಜೊತೆ ಆತನನ್ನು ಕಳುಹಿಸಿಕೊಟ್ಟಿದ್ದು, ಮುಂದೆ ಇಂತಹ ಪ್ರಯತ್ನ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದಾರೆ.