ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿಯವರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ಹೊರಗುತ್ತಿಗೆ ನೌಕರರನ್ನು ಒದಗಿಸುವ ಸಂಸ್ಥೆಗಳಲ್ಲಿ ಮೀಸಲಾತಿ ಪಾಲಿಸಲು ಸೂಚನೆ ನೀಡುವುದಾಗಿ ಹೇಳಿದ್ದಾರೆ.
ಕಾಯಂ ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ಅನ್ವಯಿಸಲಾಗುತ್ತದೆ. ಅದೇ ರೀತಿ ಹೊರಗುತ್ತಿಗೆ ಸೇವೆ ಒದಗಿಸುವ ಸಂಸ್ಥೆಗಳು ಕೂಡ ತಮ್ಮಲ್ಲಿನ ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ಪಾಲಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳು, ನಿಗಮ -ಮಂಡಳಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿಯಾದವರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಇತರೆ ಹಿಂದುಳಿದ ವರ್ಗದವರ ಅಂಕಿ ಅಂಶ ಸಂಗ್ರಹಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊರಗುತ್ತಿಗೆ ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ಜಾರಿಗೊಳಿಸುವ ಕುರಿತು ಕಾನೂನು ತರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.