ಬೆಂಗಳೂರು: ಗಿಫ್ಟ್, ಕ್ಯಾಶ್ ಬ್ಯಾಕ್ ವೋಚರ್ ಗಳು ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಗಿಫ್ಟ್ ಮತ್ತು ಕ್ಯಾಶ್ ಬ್ಯಾಕ್ ವೋಚರ್ ವ್ಯಾಪ್ತಿಗೆ ಬಾರದ ಕಾರಣ ವೋಚರ್ ಗಳ ವಿತರಣೆ ಮತ್ತು ಪೂರೈಕೆಗೆ ಜಿ.ಎಸ್.ಟಿ. ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಕರ್ನಾಟಕ ಪೂರ್ವಭಾವಿ ನಿರ್ಣಯ ಪ್ರಾಧಿಕಾರ ವೋಚರ್ ಗಳಿಗೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಪ್ರೀಮಿಯರ್ ಸೇಲ್ಸ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಗಿಫ್ಟ್, ಕ್ಯಾಶ್ ಬ್ಯಾಕ್ ವೋಚರ್ ಗಳಿಗೆ ಜಿ.ಎಸ್.ಟಿ. ಅನ್ವಯಿಸಲ್ಲ ಎಂದು ಆದೇಶ ನೀಡಿದೆ.
ಗಿಫ್ಟ್, ಕ್ಯಾಶ್ ಬ್ಯಾಕ್, ಇ-ವೋಚರ್ ಗಳು ವಿತರಣೆ ಮತ್ತು ಪೂರೈಕೆಯನ್ನು ಪರಿಗಣಿಸುವ ಸಾಧನವಷ್ಟೇ ಆಗಿರುತ್ತದೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿ ವೋಚರ್ ಗಳು ಹಣದ ವ್ಯಾಖ್ಯಾನದಲ್ಲಿ ಬರಲಿದ್ದು, ಅವುಗಳನ್ನು ಜಿಎಸ್ಟಿ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ವೋಚರ್ ಗಳ ವಿತರಣೆ ಮತ್ತು ಪೂರೈಕೆಯು ಪೂರ್ವ ಪಾವತಿಗೆ ಸಮನಾಗಿರುತ್ತದೆ. ಅದು ಸರಕು ಮತ್ತು ಸೇವೆಯ ಪೂರೈಕೆ ಆಗುವುದಿಲ್ಲ. ಹಾಗಾಗಿ ಜಿ.ಎಸ್.ಟಿ. ಅನ್ವಯವಾಗಲ್ಲ ಎಂದು ಹೇಳಲಾಗಿದೆ.