ತ್ರಿಪುರಾ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆದಿದ್ದು, 80% ಕ್ಕಿಂತ ಹೆಚ್ಚು ಮತದಾನದ ಪ್ರಮಾಣ ದಾಖಲಾಗಿದೆ. ಮಾರ್ಚ್ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಆಡಳಿತಾರೂಢ ಬಿಜೆಪಿ, ಎಡ-ಕಾಂಗ್ರೆಸ್ ಸಂಯೋಜನೆ ಮತ್ತು ಪ್ರಾದೇಶಿಕ ಪಕ್ಷವಾದ ತಿಪ್ರಾ ಮೋಥಾ ನಡುವಿನ ತ್ರಿಕೋನ ಹೋರಾಟವನ್ನು ಕಂಡ ತ್ರಿಪುರಾದಲ್ಲಿ ವಿರಳ ಹಿಂಸಾಚಾರದ ಘಟನೆಗಳ ನಡುವೆ ಗುರುವಾರ 80 ಪ್ರತಿಶತದಷ್ಟು ಮತದಾನವನ್ನು ದಾಖಲಿಸಿದೆ. ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ಮೇಘಾಲಯ ಜೊತೆಗೆ ಮಾರ್ಚ್ 2 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. 2018ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆ ಶೇ.79ರಷ್ಟು ಮತದಾನವಾಗಿತ್ತು.
ಎರಡು ದಶಕಗಳ ಹಿಂದೆ ಮಿಜೋರಾಂನಿಂದ ತ್ರಿಪುರಾಕ್ಕೆ ತೆರಳಿದ ಬ್ರೂ ಸಮುದಾಯದ ಕುಟುಂಬಗಳು ಈಗಿನ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ. ತ್ರಿಪುರಾದ ಧಲೈ ಜಿಲ್ಲೆಯ 47 ಅಂಬಾಸಾ ಅಸೆಂಬ್ಲಿ ಕ್ಷೇತ್ರದ ಹಾಡುಕ್ಲೌಪಾರಾ ಮತದಾನ ಕೇಂದ್ರದಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದ್ದರು.
ತ್ರಿಪುರಾದಲ್ಲಿ ಸಣ್ಣಪುಟ್ಟ ಹಿಂಸಾಚಾರದ ವರದಿಗಳು ಮತದಾನ ಪ್ರಕ್ರಿಯೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಹೊರಹೊಮ್ಮಿದವು. ಪ್ರತ್ಯೇಕ ಹಿಂಸಾಚಾರದ ಘಟನೆಗಳಲ್ಲಿ ಸಿಪಿಐ(ಎಂ) ನಾಯಕ ಮತ್ತು ಎಡಪಕ್ಷದ ಇಬ್ಬರು ಮತಗಟ್ಟೆ ಏಜೆಂಟ್‌ಗಳು ಸೇರಿದಂತೆ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.
ಸೆಪಹಿಜಾಲಾ ಜಿಲ್ಲೆಯ ಬೊಕ್ಸಾನಗರ ಪ್ರದೇಶದಲ್ಲಿ ಅಪರಿಚಿತರಿಂದ ಹಲ್ಲೆಗೊಳಗಾದ ಸಿಪಿಐ(ಎಂ) ಸಮಿತಿಯ ಕಾರ್ಯದರ್ಶಿ ಗಾಯಗೊಂಡಿದ್ದಾರೆ. ಗೋಮತಿ ಜಿಲ್ಲೆಯ ಕಾಕ್ರಬಾನ್ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಸಿಪಿಐ(ಎಂ) ಮತಗಟ್ಟೆ ಏಜೆಂಟರನ್ನು ಥಳಿಸಲಾಗಿದೆ. ಪಶ್ಚಿಮ ತ್ರಿಪುರಾ ಜಿಲ್ಲೆಯ ಖಯೇರ್‌ಪುರದಲ್ಲಿ ಸಿಪಿಐ(ಎಂ) ಅಭ್ಯರ್ಥಿ ಪಬಿತ್ರಾ ಕರ್ ಅವರ ಮತಗಟ್ಟೆ ಏಜೆಂಟ್‌ಗೆ ಸೇರಿದ ವಾಹನವನ್ನು ದರೋಡೆ ಮಾಡಲಾಗಿದೆ.
40-45 ಸ್ಥಳಗಳಲ್ಲಿ ಇವಿಎಂ ದೋಷಪೂರಿತವಾಗಿ ಎಲ್ಲಾ ಯಂತ್ರಗಳನ್ನು ಬದಲಾಯಿಸಲಾಗಿದೆ. ಇಲ್ಲಿಯವರೆಗೆ ಬೂತ್ ಜಾಮ್ ಅಥವಾ ವಶಪಡಿಸಿಕೊಂಡ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಗಿಟ್ಟೆ ಕಿರಣ್‌ಕುಮಾರ್ ದಿನಕರರಾವ್ ಹೇಳಿದ್ದಾರೆ.