ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಪ್ರಕರಣವನ್ನು ಶೀಘ್ರದಲ್ಲಿಯೇ ಸಿಬಿಐ ತನಿಖೆಗೆ ವಹಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಕಾಂಗ್ರೆಸ್ ಎಂ ಎಲ್ ಸಿ ಯು.ಬಿ.ವೆಂಕಟೇಶ್, ವಿಧಾನಪರಿಷತ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಶೇಖರ್, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಿದ್ಧತೆ ನಡೆಸಲಾಗಿದೆ. ಈ ಬಗ್ಗೆ ಗೃಹ ಇಲಾಖೆ ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಸಿಐಡಿ, ಸಹಕಾರ ಇಲಾಖೆ ಹಾಗೂ ಇಡಿ ಹಗರಣದ ತನಿಖೆ ನಡೆಸಿ ಇದುವರೆಗೆ 1290 ಕೋಟಿ ರೂಪಾಯಿಗಳ ವಂಚನೆಯನ್ನು ಪತ್ತೆ ಮಾಡಿವೆ. ಸಿಐಡಿ ತನಿಖೆ ನಡೆಸುತ್ತಿರುವುದರಿಂದ ಪ್ರಕರಣವನ್ನು ಸಿಬಿಐ ಗೆ ವಹಿಸುವುದು ವಿಳಂಬವಾಗಿದೆ. 2014-15 ರಿಂದ 2018-19ರವರೆಗಿನ ಲೆಕ್ಕಪತ್ರಗಳನ್ನು ಮರುಲೆಕ್ಕ ಪರಿಶೋಧನೆಗೆ ಆದೇಶಿಸಲಾಗಿದೆ. ಜಾರಿ ನಿರ್ದೇಶನಾಲಯ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ ಎಂದರು.