alex Certify ಹುಣಸೋಡು ಸ್ಟೋಟ ಪ್ರಕರಣದಲ್ಲಿ ಪರಿಹಾರ ವಿಳಂಬ: ಪ್ರಧಾನಿಗೆ ಮನವಿ ಸಲ್ಲಿಸಲು ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಣಸೋಡು ಸ್ಟೋಟ ಪ್ರಕರಣದಲ್ಲಿ ಪರಿಹಾರ ವಿಳಂಬ: ಪ್ರಧಾನಿಗೆ ಮನವಿ ಸಲ್ಲಿಸಲು ನಿರ್ಧಾರ

ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ವಿಫಲವಾಗಿರುವ ಸ್ಥಳೀಯ ಶಾಸಕರ ಮತ್ತು ಸಂಸದರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವ ಪ್ರಧಾನ ಮಂತ್ರಿಗಳ ಎದುರು ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ನವಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಣಸೋಡು ಸ್ಫೋಟದಿಂದ ಅದರ ಸುತ್ತಮುತ್ತಲಿನ ಗ್ರಾಮಗಳ ಅನೇಕ ಮನೆಗಳು ಬಿರುಕು ಬಿಟ್ಟಿದ್ದವು. ಎಲೆಕ್ಟಾನಿಕ್ ಉಪಕರಣಗಳು ಹಾನಿಗೊಳಗಾಗಿದ್ದವು. ನೂರಾರು ಗ್ರಾಮಸ್ಥರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರು. ಸುಮಾರು 850 ಸಂತ್ರಸ್ತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜಿ.ಪಂ.ಇಜಿನಿಯರಿಂಗ್ ವಿಭಾಗ ಪ್ರತಿ ಮನೆಗಳು ಶೇ. 10ರಷ್ಟು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. ಘಟನೆ ನಡೆದು 2 ವರ್ಷವಾದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.

ಈ ಬಗ್ಗೆ ಹಲವು ಬಾರಿ ನಮ್ಮ ವೇದಿಕೆ ಪ್ರತಿಭಟನೆ ನಡೆಸಿದೆ. ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಈ ಬಗ್ಗೆ ಯಾವ ಸ್ಪಂದನೆಯನ್ನೂ ನೀಡಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿಗಳು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾಗ ಅವರನ್ನು ಗಂಟೆಗಟ್ಟಲೆ ಕಾಯ್ದು ಮನವಿ ನೀಡಲು ಹೋದರೆ ನಮ್ಮ ಕಡೆ ತಿರುಗಿಯೂ ನೋಡಲಿಲ್ಲ. ಸಂಸದ ಮತ್ತು ಶಾಸಕರು ಕೂಡ ತಮಗೆ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.

ಬಿಜೆಪಿ ಸರ್ಕಾರಕ್ಕೆ ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಆಸಕ್ತಿ ಇಲ್ಲ. ಅದರ ಬದಲು ಶಾಸಕ ಕೆ.ಎಸ್. ಈಶ್ವರಪ್ಪನವರು ಗಣಿ ಮಾಲಿಕರ ಪರವಾಗಿ ನಿಂತು ಮತ್ತೆ ಕಲ್ಲುಕ್ವಾರೆ ನಡೆಸುವಂತೆ ಅನುಮತಿ ಕೋರಿದ್ದಾರೆ. ಇವರೆಲ್ಲರ ಸಂತ್ರಸ್ತರ ವಿರೋಧಿ ನಿಲುವನ್ನು ಖಂಡಿಸಿ ಪ್ರಧಾನ ಮಂತ್ರಿಗಳು ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವ ವೇಳೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...