ವಿಧಾನಸಭೆಯ ಕೊನೆ ಅಧಿವೇಶನ ನಡೆಯುತ್ತಿದ್ದು, ಈ ವರ್ಷವೇ ಚುನಾವಣೆ ನಡೆಯಲಿದೆ. ಸದನದಲ್ಲಿ ಸಾರ್ವಜನಿಕ ಸಮಸ್ಯೆಗಳ ಜೊತೆಗೆ ಹಲವು ಸ್ವಾರಸ್ಯಕರ ಚರ್ಚೆಗಳು ಸಹ ನಡೆದಿದ್ದು ಅದರ ಒಂದು ತುಣುಕು ಇಲ್ಲಿದೆ.
ಮಂಗಳವಾರಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್ ನಲ್ಲಿ ರೈತರ ಕೃಷಿ ಯಂತ್ರೋಪಕರಣಗಳಿಗೆ ಘೋಷಿಸಿದ್ದ ಡೀಸೆಲ್ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೆ ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಸಚಿವ ಅಶೋಕ್ ಅವರಿಗೆ, ನೀನು ಎಲ್ಲೆಲ್ಲೂ ಹೋಗಿ ಮಲಗ್ತಿಯಲ್ಲ. ಅಲ್ಲಿಯ ಜನ ಈ ಬಗ್ಗೆ ಹೇಳಿರಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಸಚಿವರು, ಸಾರ್, ಹಕ್ಕು ಪತ್ರ ವಿತರಣೆಗಾಗಿ ನಾನು ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂದು ಹೇಳಿದ್ದು, ಮಿನಿಸ್ಟರ್ ಬಂದ್ರು ಅಂತ ಜನ ಒಳ್ಳೆ ಊಟ ಮಾಡಿಸಿರುತ್ತಾರೆ ಎಂದು ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಗ್ರಾಮ ವಾಸ್ತವ್ಯದಲ್ಲಿ ನಾನು ನಿಮ್ಮ ಹಾಗೆ ನಾಟಿ ಕೋಳಿ ಮಾಡಿಸಲ್ಲ ಎಂದು ಹೇಳಿದ್ದು ಆಗ ಸಿದ್ದರಾಮಯ್ಯ, ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದ್ದ ಕಾರಣ ಆಹಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ಡಿಸೆಂಬರ್ ಕೊನೆಯಿಂದಲೇ ನಾನು ಪ್ಯೂರ್ ವೆಜಿಟೇರಿಯನ್ ಆಗಿದ್ದೇನೆ ಎಂದು ಹೇಳಿದರು.