ಬೆಂಗಳೂರು ಏರೋ ಇಂಡಿಯಾದ 14ನೇ ಆವೃತ್ತಿಗೆ ಸಾಕ್ಷಿಯಾಗ್ತಿದೆ. ಈಗಾಗ್ಲೇ ಏರೋ ಇಂಡಿಯಾಗೆ ಚಾಲನೆ ದೊರೆತಿದ್ದು, ಆಗಸದಲ್ಲಿ ವೈಮಾನಿಕ ಪ್ರದರ್ಶನಗಳ ಹಬ್ಬ ಶುರುವಾಗಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಕಣ್ತುಂಬಿಕೊಂಡರು.
ಈ ವೇಳೆ ಯುದ್ಧವಿಮಾನಗಳ ಸಾಹಸವನ್ನು ಮೋದಿ ಕೊಂಡಾಡಿದ್ರು. ಏರೋ ಇಂಡಿಯಾ ಪ್ರದರ್ಶನ 5 ದಿನಗಳ ಕಾಲ ನಡೆಯಲಿದ್ದು, 700ಕ್ಕೂ ಹೆಚ್ಚು ರಕ್ಷಣಾ ಕಂಪನಿಗಳು ಮತ್ತು 98 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸೇನೆಯ ಯುದ್ಧವಿಮಾನಗಳು, ಹೆಲಿಕಾಪ್ಟರ್, ಸೇನೆಯ ಇತರ ಆಧುನಿಕ ಉಪಕರಣಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.
ಏರ್ಶೋನಲ್ಲಿಂದು ಯುದ್ಧವಿಮಾನಗಳು ಆಗಸದಲ್ಲಿ ಹೃದಯದ ಚಿತ್ತಾರ ಬರೆದಿವೆ. ಪ್ರಧಾನಿ ಮೋದಿ ಕೂಡ ಯುದ್ಧ ವಿಮಾನಗಳ ಈ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾದರು. ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್ ಆಗಿದೆ.
ಒಟ್ಟು ಮೂರು ವಿಮಾನಗಳು ಜೊತೆಯಾಗಿ ಆಗಸದಲ್ಲಿ ಹೃದಯದ ಚಿತ್ತಾರ ಸೃಷ್ಟಿಸಿದ್ದವು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಏರೋ ಇಂಡಿಯಾ ಕೇವಲ ಒಂದು ಪ್ರದರ್ಶನವಲ್ಲ, ಭಾರತದ ಕಾರ್ಯಕ್ಷಮತೆ ಮತ್ತು ಆತ್ಮವಿಶ್ವಾಸದ ಪ್ರತೀಕ ಎಂದರು. ಅಮೆರಿಕದ ಪ್ರತಿನಿಧಿ ಎಲಿಜಬೆತ್ ಜೋನ್ಸ್ ಮಾತನಾಡಿ, ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುತ್ತಿದೆ, ನಾವು ಕೂಡ ಅದರ ಪಾಲುದಾರರಾಗಬಯಸುತ್ತೇವೆ ಎಂದು ಹೇಳಿದ್ರು.