ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ನಾಯಕ ವೇಲುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಮತ್ತು ಸೂಕ್ತ ಸಮಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಮಿಳು ನ್ಯಾಶನಲಿಸ್ಟ್ ಮೂವ್‌ಮೆಂಟ್ (ಟಿಎನ್‌ಎಂ) ನಾಯಕ ಪಿ. ನೆಡುಮಾರನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಉಲಕ ತಮಿಳರ್ ಪೆರಮೈಪ್ಪು ಸಂಸ್ಥಾಪಕ ಮತ್ತು ತಮಿಳು ರಾಷ್ಟ್ರೀಯವಾದಿ ಚಳವಳಿಯ ನಾಯಕ ಪಿ. ನೆಡುಮಾರನ್ ತಂಜಾವೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಭಾಕರನ್ ಆರೋಗ್ಯವಾಗಿದ್ದಾರೆ ಮತ್ತು ಅವರ ಕುಟುಂಬವು ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದರು.
ಆದರೆ ಈ ಸಮಯದಲ್ಲಿ ಪ್ರಭಾಕರನ್ ಎಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ನೆಡುಮಾರನ್ ಪ್ರತಿಪಾದಿಸಿದರು. ಪ್ರಭಾಕರನ್ ಅವರ ಕುಟುಂಬದವರು ಈ ಘೋಷಣೆ ಮಾಡಲು ಮಾತ್ರ ಒಪ್ಪಿಗೆ ನೀಡಿದ್ದಾರೆ ಎಂದು ನೆಡುಮಾರನ್ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಪ್ರಭಾಕರನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಕಟ್ಟಾ ಎಲ್‌ಟಿಟಿಇ ಬೆಂಬಲಿಗರಾದ ನೆಡುಮಾರನ್, ಸೂಕ್ತ ಸಮಯದಲ್ಲಿ ಪ್ರಭಾಕರನ್ ಅವರು ತಮಿಳು ಈಳಂ ಸ್ಥಾಪನೆಗೆ ತಮ್ಮ ನಿರ್ದಿಷ್ಟ ಉದ್ದೇಶಗಳನ್ನು ಪ್ರಕಟಿಸುತ್ತಾರೆ ಎಂದು ಭವಿಷ್ಯ ನುಡಿದರು.
ಪ್ರತ್ಯೇಕ ತಮಿಳು ಈಳಂಗಾಗಿ ಹೋರಾಡುತ್ತಿದ್ದ ಶ್ರೀಲಂಕಾದ ಮುಗ್ಧ ತಮಿಳರ ಸಾವಿಗೆ ಕಾರಣವಾದ ಜನಾಂಗೀಯ ಸಂಘರ್ಷದ ಅಂತಿಮ ಹಂತದಲ್ಲಿ, ಮೇ 2009 ರಲ್ಲಿ ಶ್ರೀಲಂಕಾ ಸೇನೆಯು ಎಲ್‌ಟಿಟಿಇ ನಾಯಕ ಸತ್ತಿದ್ದಾರೆಂದು ಘೋಷಿಸಿತು ಎಂದು ಅವರು ಆರೋಪಿಸಿದರು.