ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಜಮಿಯತ್ ಉಲೇಮಾ – ಇ – ಹಿಂದ್ ಅಧಿವೇಶನದಲ್ಲಿ ಅಧ್ಯಕ್ಷ ಮೊಹಮ್ಮದ್ ಮದನಿ ವಿವಾದಿತ ಹೇಳಿಕೆ ನೀಡಿದ್ದಾರೆ. ಓಂ, ಅಲ್ಲಾ ಒಂದೇ ಎಂದು ಅವರು ಹೇಳಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹಿಂದೂ ಧಾರ್ಮಿಕ ಮುಖಂಡ ಆಚಾರ್ಯ ಲೋಕೇಶ್ ಮುನಿ ವೇದಿಕೆಯಿಂದ ಹೊರ ನಡೆದಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಮಾತನಾಡುವ ವೇಳೆ, ಈ ವಿಷಯ ಪ್ರಸ್ತಾಪಿಸಿದ ಮೊಹಮದ್ ಮದನಿ, ನಾನು ಈ ಹಿಂದೆ ಓರ್ವ ಸಂತರಿಗೆ ಶ್ರೀರಾಮ, ಬ್ರಹ್ಮ ಅಥವಾ ಶಿವ ಯಾರು ಇಲ್ಲದೆ ಇದ್ದಾಗ ಯಾರನ್ನು ಪೂಜಿಸುತ್ತಿದ್ದರು ಎಂದು ಪ್ರಶ್ನಿಸಿದ್ದೆ. ಆಗ ಅವರು ಓಂ ಎಂದು ಹೇಳಿದ್ದರು. ಇದನ್ನೇ ನಾವು ಅಲ್ಲಾ ಎನ್ನುತ್ತೇವೆ. ಇಂಗ್ಲೀಷ್ ನಲ್ಲಿ ಮಾತನಾಡುವವರು ಗಾಡ್ ಎನ್ನುತ್ತಾರೆ. ಪಾರ್ಸಿ ಭಾಷಿಕರು ಇದನ್ನು ಖುದಾ ಎನ್ನುತ್ತಾರೆ ಎಂದು ಹೇಳಿದರು.
ಅವರ ಈ ಹೇಳಿಕೆಗೆ ಸಭೆಯಲ್ಲೇ ಇದ್ದ ಆಚಾರ್ಯ ಲೋಕೇಶ್ ಮುನಿ ಆಕ್ರೋಶ ವ್ಯಕ್ತಪಡಿಸಿ ವೇದಿಕೆಯಿಂದ ಹೊರ ನಡೆದಿದ್ದು, ಬಳಿಕ ಮಾತನಾಡಿದ ಅವರು ಸೌಹಾರ್ದತೆಯಿಂದ ಬಾಳುವುದನ್ನು ನಾವು ಒಪ್ಪುತ್ತೇವೆ. ಆದರೆ ಓಂ, ಅಲ್ಲಾ ಒಂದೇ ಎಂಬ ಮದನಿಯವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ತಿಳಿಸಿದರು.