ನವದೆಹಲಿ: ಲೈಂಗಿಕ ಕಿರುಕುಳದ ಆರೋಪದ ಮೇಲೆ ಭಾರತೀಯ ಮಹಿಳಾ 17 ವರ್ಷದೊಳಗಿನವರ ಫುಟ್ಬಾಲ್ ತಂಡದ ಸಹಾಯಕ ಕೋಚ್ ಹುದ್ದೆಯಿಂದ ವಜಾಗೊಂಡ ಅಲೆಕ್ಸ್ ಮಾರಿಯೋ ಆಂಬ್ರೋಸ್ ವಿರುದ್ಧ ದೆಹಲಿ ನ್ಯಾಯಾಲಯವು ಬಂಧನದ ವಾರಂಟ್ ಹೊರಡಿಸಿದೆ.
ಆಂಬ್ರೋಸ್ ವಿರುದ್ಧ ದ್ವಾರಕಾ ಸೆಕ್ಟರ್ 23 ಪೊಲೀಸ್ ಠಾಣೆಯಲ್ಲಿ ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಸೆಕ್ಷನ್ 12(ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಯೂರೋಪ್‌ನ ತರಬೇತಿ ಮತ್ತು ಎಕ್ಸ್ ಪೋಸರ್ ಪ್ರವಾಸದ ಸಮಯದಲ್ಲಿ ಆಟಗಾರನೊಂದಿಗೆ ಆಪಾದಿತ ದುರ್ವರ್ತನೆಗಾಗಿ ಸಹಾಯಕ ತರಬೇತುದಾರನನ್ನು ನಾರ್ವೆಯಿಂದ ಹಿಂದಕ್ಕೆ ಕರೆಸಲಾಯಿತು. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಕಳೆದ ವರ್ಷ ಜುಲೈನಲ್ಲಿ ಆಂಬ್ರೋಸ್ ಅವರನ್ನು ವಜಾಗೊಳಿಸಿತ್ತು.
ಶುಕ್ರವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗಗನ್‌ದೀಪ್ ಜಿಂದಾಲ್ ಅವರು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 70 ರ ಅಡಿಯಲ್ಲಿ ಬಂಧನದ ವಾರಂಟ್ ಹೊರಡಿಸಿದ್ದಾರೆ. ನ್ಯಾಯಾಲಯವು ಮುಂದಿನ ವಿಚಾರಣೆಗೆ ಫೆಬ್ರವರಿ 25 ರಂದು ದಿನಾಂಕ ನಿಗದಪಡಿಸಿದೆ.