ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗಬಹುದೆಂಬ ಚರ್ಚೆ ಈಗಾಗಲೇ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮೊದಲಾದವರ ಹೆಸರು ಕೇಳಿ ಬರುತ್ತಿದೆ.
ಇದರ ಮಧ್ಯೆ ಡಾ. ಜಿ. ಪರಮೇಶ್ವರ್ ಅವರ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿ ಆಗಲೆಂಬ ಕಾರಣಕ್ಕೆ ಹರಕೆ ಹೊತ್ತು ಕಳೆದ 19 ವರ್ಷಗಳಿಂದ ಗಡ್ಡ – ಮೀಸೆ ಬಿಟ್ಟಿದ್ದಾರೆ. ಪರಮೇಶ್ವರ್ ಮುಖ್ಯಮಂತ್ರಿಯಾದ ಬಳಿಕವೇ ತಿರುಪತಿಯಲ್ಲಿ ತಾವು ಗಡ್ಡ – ಮೀಸೆ ತೆಗೆಸಿಕೊಳ್ಳುವುದಾಗಿ ಶಪಥ ಮಾಡಿದ್ದಾರೆ.
ಮಧುಗಿರಿ ವಿಧಾನಸಭಾ ಕ್ಷೇತ್ರದ ಹುಣಸೆಮರದಟ್ಟಿ ಗ್ರಾಮದ ಗೌಡ ಮುದ್ದಯ್ಯ ಇಂತಹದೊಂದು ಶಪಥ ಮಾಡಿದ್ದು, ಸ್ವತಃ ಪರಮೇಶ್ವರ್ ಅವರೇ ಗಡ್ಡ – ಮೀಸೆ ತೆಗೆಸಿಕೊಳ್ಳುವಂತೆ ಹೇಳಿದ್ದರೂ ಸಹ ಅವರು ಒಪ್ಪಿಕೊಂಡಿಲ್ಲ. ಚಿನಕ ವಜ್ರ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಗೌಡ ಮುದ್ದಯ್ಯ ಅವರನ್ನು ಗುರುವಾರದಂದು ಸಮಾರಂಭ ಒಂದರ ವೇದಿಕೆ ಬಳಿ ಕರೆದಿದ್ದ ಪರಮೇಶ್ವರ್ ಮಾತನಾಡುವಾಗ ಭಾವುಕರಾದರು.