ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 20122- 25ಕ್ಕೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನವೀಕರಿಸಬಹುದಾದ ಇಂಧನ ನೀತಿ ತಿದ್ದುಪಡಿಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಸೋಲಾರ್ ವಿದ್ಯುತ್ ಉತ್ಪಾದನೆಗೆ ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ 3.5 ಎಕರೆಯಂತೆ ಭೂ ಬಳಕೆಗೆ ನೀಡಿದ್ದ ಮಿತಿಯನ್ನು 4 ಎಕರೆಗೆ ಹೆಚ್ಚಳ ಮಾಡಲಾಗಿದೆ. ಪವನ ವಿದ್ಯುತ್ ಯೋಜನೆ ಪೂರ್ಣಗೊಳಿಸಿ ಕಾರ್ಯ ಆರಂಭ ಮಾಡಲು ಇದ್ದ ಕಾಲಾವಧಿಯನ್ನು ಮೂರು ವರ್ಷದಿಂದ ಎರಡು ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಉದ್ಯಮಿಗಳ ಮನವಿ ಮೇರೆಗೆ ಈ ತಿದ್ದುಪಡಿ ಮಾಡಿರುವುದಾಗಿ ಸಚಿವರು ಹೇಳಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳಿಗೆ 13,708 ಕೋಟಿ ರೂ. ಸಾಲ ಪಡೆಯುವ ಸಂಬಂಧ ಸರ್ಕಾರದಿಂದ ಖಾತರಿ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.