ವ್ಯಾಲಂಟೈನ್ ವೀಕ್ ಶುರುವಾಗಿದೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನಕ್ಕಾಗಿ ಜೋಡಿಹಕ್ಕಿಗಳೆಲ್ಲ ಕಾಯುತ್ತಿದ್ದಾರೆ. ವ್ಯಾಲಂಟೈನ್ ಡೇ ಪ್ರೇಮ ನಿವೇದನೆಗೆ ಮೀಸಲಾದ ದಿನ. ನಾವು ಇಷ್ಟಪಟ್ಟವರ ಬಳಿ ನಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತೇವೆ. ಇದರೊಂದಿಗೆ ಉಡುಗೊರೆ, ಸರ್ಪ್ರೈಸ್ ಕೊಟ್ಟು ಒಬ್ಬರಿಗೊಬ್ಬರು ಖುಷಿಪಡಿಸುತ್ತಾರೆ.
ಆದರೆ ಕೆಲವೊಮ್ಮೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಉಡುಗೊರೆಯನ್ನು ಆರಿಸುವಾಗ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಅದು ಸಂಬಂಧವನ್ನು ಬಲಪಡಿಸುವ ಬದಲು ಬಿರುಕು ಉಂಟುಮಾಡುತ್ತದೆ. ಪ್ರೀತಿಪಾತ್ರರಿಗೆ ಯಾವ್ಯಾವ ಉಡುಗೊರೆಗಳನ್ನು ನೀಡಬಾರದು ಅನ್ನೋದನ್ನು ನೋಡೋಣ. ವಾಸ್ತು ಪ್ರಕಾರ ಈ ವಸ್ತುಗಳನ್ನು ನೀಡುವುದು ಅಶುಭವೆಂದು ಪರಿಗಣಿಸಲಾಗಿದೆ.
ಕರವಸ್ತ್ರ– ಪ್ರೀತಿಪಾತ್ರರು ಪರಸ್ಪರ ಕರವಸ್ತ್ರವನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಉಡುಗೊರೆಯು ತುಂಬಾ ರೋಮ್ಯಾಂಟಿಕ್ ಆಗಿ ಕಾಣುತ್ತದೆ. ಆದರೆ ಪ್ರೇಮಿಗೆ ಕರವಸ್ತ್ರ ನೀಡುವುದು ಅಶುಭ. ಇದು ನಿಮ್ಮ ಸಂಬಂಧದಲ್ಲಿ ಸಮಸ್ಯೆ ತರಬಹುದು.
ಸುಗಂಧ ದ್ರವ್ಯ-ಸುಗಂಧ ದ್ರವ್ಯವು ಸಾಮಾನ್ಯ ಉಡುಗೊರೆಗಳಲ್ಲಿ ಒಂದಾಗಿದೆ. ಆದರೆ ನಿಮ್ಮ ಪ್ರೀತಿಪಾತ್ರರಿಗೆ ನೀವು ಸುಗಂಧ ದ್ರವ್ಯದಂತಹ ಪರಿಮಳಯುಕ್ತ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ, ಅದು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡುತ್ತದೆ. ಅದಕ್ಕಾಗಿಯೇ ಪ್ರಿಯಕರನಿಗೆ ಅಥವಾ ಪ್ರಿಯತಮೆಗೆ ಸುಗಂಧ ದ್ರವ್ಯವನ್ನು ನೀಡಬೇಡಿ.
ಪಾದರಕ್ಷೆಗಳು-ಪ್ರೇಮಿಗಳ ದಿನ ಪ್ರೀತಿಪಾತ್ರರಿಗೆ ಶೂ ಅಥವಾ ಹೀಲ್ಸ್ ಅನ್ನು ಅನೇಕ ಬಾರಿ ಉಡುಗೊರೆಯಾಗಿ ನೀಡುತ್ತೀರಿ. ಆದರೆ ಬೂಟುಗಳು ನಕಾರಾತ್ಮಕ ಶಕ್ತಿಯ ಸಂಕೇತ. ಆದ್ದರಿಂದ ಪ್ರೇಮಿಗೆ ಶೂಗಳನ್ನು ಉಡುಗೊರೆಯಾಗಿ ನೀಡಬೇಡಿ. ಇದು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು.
ಕಪ್ಪು ಬಟ್ಟೆ-ಕಪ್ಪು ಬಣ್ಣವು ಅನೇಕರ ಫೇವರಿಟ್. ಪ್ರೇಮಿಗೆ ಕಪ್ಪು ಉಡುಪನ್ನು ಉಡುಗೊರೆಯಾಗಿ ನೀಡೋಣ ಎಂದುಕೊಂಡಿದ್ದರೆ ಆ ಯೋಚನೆಯನ್ನು ಬದಲಾಯಿಸಿಕೊಳ್ಳಿ. ಕಪ್ಪು ಬಣ್ಣವನ್ನು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣವು ನೋವು ಮತ್ತು ದುಃಖದ ಸಂಕೇತವೂ ಹೌದು. ಕಪ್ಪು ಉಡುಪನ್ನು ಗಿಫ್ಟ್ ಆಗಿ ನೀಡಿದರೆ ಪ್ರೇಮಿಗಳ ಮಧ್ಯೆ ಭಿನ್ನಭಿಪ್ರಾಯ ಮೂಡಬಹುದು.