ಕೇಂದ್ರದ ನರೇಂದ್ರ ಮೋದಿ ಸರ್ಕಾರ ತನ್ನ ಎರಡನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಿದೆ. ಬಜೆಟ್‌ನಲ್ಲಿ ವಿವಿಧ ಯೋಜನೆಗಳಿಗೆ ಸರ್ಕಾರ ಹಣ ಮೀಸಲಿಟ್ಟಿದೆ.
ಅಷ್ಟಕ್ಕೂ ಸರ್ಕಾರಕ್ಕೆ ಆ ಹಣ ಎಲ್ಲಿಂದ ಬರುತ್ತೆ ಅನ್ನೋದು ನಿಮಗೆ ಗೊತ್ತಾ? ವಿಪರ್ಯಾಸ ಅಂದ್ರೆ ಸರ್ಕಾರ ಅತಿ ಹೆಚ್ಚು ಸಾಲ ಪಡೆದು ಅದನ್ನು ಖರ್ಚು ಮಾಡುತ್ತದೆ. ಉಳಿದ ಹಣವನ್ನು ನೇರ ಮತ್ತು ಪರೋಕ್ಷ ತೆರಿಗೆಗಳ ಆದಾಯದಿಂದ ಪಡೆಯುತ್ತದೆ.
ಸರ್ಕಾರ ಎಲ್ಲಿಂದ ಹಣ ಸಂಗ್ರಹಿಸುತ್ತದೆ ?
2023-24ರಲ್ಲಿ ಮೋದಿ ಸರಕಾರ ವ್ಯಯಿಸಲಿರುವ ಹಣ ಎಲ್ಲಿಂದ ಬರುತ್ತದೆ ಅನ್ನೋದನ್ನು ನೋಡ್ತಾ ಹೋದ್ರೆ ಕೆಲವೊಂದು ಆಸಕ್ತಿಕರ ಸಂಗತಿಗಳು ಗಮನಸೆಳೆಯುತ್ತವೆ. ಸರ್ಕಾರ ಒಂದು ರೂಪಾಯಿಗೆ 34 ಪೈಸೆ ಸಾಲ ಮಾಡುತ್ತದೆ. ಸರಕಾರದ ಜಿಎಸ್‌ಟಿಯಿಂದ 17 ಪೈಸೆ ಸಿಗುತ್ತದೆ. ಕಾರ್ಪೊರೇಟ್ ತೆರಿಗೆ ಮೂಲಕ 15 ಪೈಸೆ, ಆದಾಯ ತೆರಿಗೆಯಲ್ಲಿ 15 ಪೈಸೆ, ದೇಶಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಕಸ್ಟಮ್ ಸುಂಕದ ಮೂಲಕ 4 ಪೈಸೆ, ಪೆಟ್ರೋಲ್ ಡೀಸೆಲ್ ಮೇಲೆ ಅಬಕಾರಿ ಸುಂಕ ವಿಧಿಸುವುದರಿಂದ 7 ಪೈಸೆ, ತೆರಿಗೆಯೇತರ ಆದಾಯದ ಮೂಲಕ 5 ಪೈಸೆ ಹೀಗೆ ಸರ್ಕಾರದ ಬೊಕ್ಕಸಕ್ಕೆ ಹಣ ಸೇರ್ಪಡೆಯಾಗುತ್ತದೆ. ಒಂದು ರೂಪಾಯಿಯಲ್ಲಿ 2 ಪೈಸೆಯಷ್ಟನ್ನು ಸರ್ಕಾರ ಸಾಲವಲ್ಲದ ಬಂಡವಾಳ ರಶೀದಿಗಳ ಮೂಲಕ ಸಂಗ್ರಹಿಸುತ್ತದೆ.
ಸರ್ಕಾರ ಎಲ್ಲಿ ಖರ್ಚು ಮಾಡುತ್ತದೆ ?
ಸರ್ಕಾರಕ್ಕೆ ಸಿಗುವ ಒಂದು ರೂಪಾಯಿಯಲ್ಲಿ 20 ಪೈಸೆಯಷ್ಟು ಸಾಲದ ಬಡ್ಡಿ ಮರುಪಾವತಿಗೆ ಖರ್ಚು ಮಾಡಲಾಗುತ್ತದೆ. 18 ಪೈಸೆಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಪಾವತಿಸುತ್ತದೆ ಮತ್ತು ತೆರಿಗೆಗಳು-ಸುಂಕಗಳಲ್ಲಿ ಅವರ ಪಾಲನ್ನು ಪಡೆಯಬಹುದು. ಸರ್ಕಾರ ತನ್ನ ಯೋಜನೆಗಳಿಗೆ 17 ಪೈಸೆ ಖರ್ಚು ಮಾಡುತ್ತದೆ. ಹಣಕಾಸು ಆಯೋಗ ಮತ್ತು ವರ್ಗಾವಣೆಯ ಶಿಫಾರಸುಗಳ ಆಧಾರದ ಮೇಲೆ 9 ಪೈಸೆ ಹಣವನ್ನು ವರ್ಗಾಯಿಸುತ್ತದೆ. ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ 17 ಪೈಸೆ ಖರ್ಚು ಮಾಡುತ್ತದೆ. ರಕ್ಷಣಾ ಕ್ಷೇತ್ರಕ್ಕೆ ಸಾಮಾನ್ಯ ಜನರಿಗೆ 8 ಪೈಸೆ, ಸಬ್ಸಿಡಿಗೆ 7 ಪೈಸೆ ಖರ್ಚು ಮಾಡಲಾಗುವುದು.
ಸರ್ಕಾರವು ಪಿಂಚಣಿ ನೀಡಲು 4 ಪೈಸೆ ಮತ್ತು ಇತರ ರೀತಿಯ ವೆಚ್ಚಗಳಿಗೆ 8 ಪೈಸೆಗಳಷ್ಟನ್ನು ಖರ್ಚು ಮಾಡುತ್ತದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಸರ್ಕಾರದ ಸ್ವಂತ ಆದಾಯದ ಬಹುಪಾಲು ಭಾಗ ಸಾಲದ ಬಡ್ಡಿಯನ್ನು ಪಾವತಿಸಲು ಖರ್ಚಾಗುತ್ತದೆ. ವೆಚ್ಚ ಮತ್ತು ಆದಾಯದ ನಡುವಿನ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ ದಾಖಲೆಯ 15.4 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲು ಯೋಜಿಸುತ್ತಿದೆ. ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ತೆಗೆದುಕೊಂಡ ಒಟ್ಟು ಸಾಲ 14.21 ಲಕ್ಷ ಕೋಟಿ ರೂಪಾಯಿಗಳಷ್ಟಿದೆ.