ತನ್ನ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಿ ಆಕೆ ಗರ್ಭ ಧರಿಸಲು ಕಾರಣನಾಗಿದ್ದ ವ್ಯಕ್ತಿಯೊಬ್ಬನಿಗೆ ತನ್ನ ಜೀವಿತಾವಧಿಯಲ್ಲಿ ಮೂರು ಜೀವಾವಧಿ ಶಿಕ್ಷೆ ವಿಧಿಸಿ ಕೇರಳ ನ್ಯಾಯಾಲಯ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿಯಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತೆಯನ್ನು ಬೆದರಿಸಿದ ಅಪರಾಧಗಳಿಗಾಗಿ ಮಂಜೇರಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಶಿಕ್ಷೆ ವಿಧಿಸಿದ್ದಾರೆ.
ಪೋಕ್ಸೊ ಕಾಯ್ದೆಯಡಿ ಅಪರಾಧಿಗೆ ಮೂರು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಮತ್ತು ನ್ಯಾಯಾಲಯವು ಅವನ ಜೀವನದ ಉಳಿದ ಅವಧಿಗೆ ಜೈಲಿನಲ್ಲಿರಲು ನಿರ್ದೇಶಿಸಿದೆ ಎಂದು ಎಸ್ಪಿಪಿ ಹೇಳಿದರು.
ನ್ಯಾಯಾಲಯ ಆತನಿಗೆ 6.6 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ . ಪ್ರಕರಣದ ವಿವರಗಳನ್ನು ನೀಡಿದ ಎಸ್ಪಿಪಿ, ಮಾರ್ಚ್ 2021 ರಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮೊದಲ ಅತ್ಯಾಚಾರದ ಘಟನೆ ಸಂಭವಿಸಿದೆ ಎಂದು ಹೇಳಿದರು.
ಆಗ 15 ವರ್ಷದ ಹುಡುಗಿಯಾಗಿದ್ದ ಆಕೆ ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಆನ್ಲೈನ್ ತರಗತಿಗಳಲ್ಲಿ ಭಾಗಿಯಾಗಲು ಮನೆಯಲ್ಲಿದ್ದಳು. ಈ ವೇಳೆ ಅವಳ ತಂದೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅತ್ಯಾಚಾರವೆಸಗುತ್ತಿದ್ದ ಎಂದು ಪ್ರಾಸಿಕ್ಯೂಟರ್ ಹೇಳಿದರು.
ಸಂತ್ರಸ್ತೆ ವಿರೋಧಿಸಿದಾಗ ಆತ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಎಸ್ಪಿಪಿ ತಿಳಿಸಿದ್ದಾರೆ.