ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿದ್ದು, ರಾಜ್ಯ ರಾಜಕಾರಣ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಈ ನಡುವೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಶಾಸಕ ಜಮೀರ್ ಅಹ್ಮದ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕೆಲ ಸಮಯ ಚರ್ಚೆ ನಡೆಸಿದ್ದಾರೆ.
ಈ ವೇಳೆ ಚಾಮರಾಜಪೇಟೆ ಕ್ಷೇತ್ರದ ವಿಚಾರವಾಗಿ ಕ್ಷೇತ್ರದ ಅನುದಾನ ಕಡಿತವಾಗಿರುವ ಬಗ್ಗೆ, ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ, ಪಾದರಾಯನಪುರ ರಸ್ತೆ ಅಗಲೀಕರಣಕ್ಕೆ ಬಿಡುಗಡೆಯಾದ 50 ಕೋಟಿ ಹಣ ವಾಪಸ್ ಪಡೆದಿರುವ ವಿಚಾರಗಳ ಬಗ್ಗೆ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದಾರೆ. ರಸ್ತೆ ಕಾಮಗಾರಿಗಾಗಿ ಬಿಡುಗಡೆಯಾದ 50 ಕೋಟಿ ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.