ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್, ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಕುರಿತು ಪ್ರಕಟಿಸಿರುವ ವರದಿ ಭಾರತೀಯ ಷೇರುಪೇಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಅದಾನಿ ಕಂಪನಿಗಳ ಷೇರುಗಳ ಬೆಲೆ ತೀವ್ರ ಕುಸಿತಗೊಂಡಿದ್ದು, ಇದರ ಪರಿಣಾಮ ವಿಶ್ವ ಸಿರಿವಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಈಗ 7ನೇ ಸ್ಥಾನಕ್ಕೆ ಬಂದಿಳಿದಿದ್ದಾರೆ.
ಅದಾನಿ ಸಮೂಹ ಷೇರುಪೇಟೆಯಲ್ಲಿ ಕಪಟತನ ಮಾಡಿದೆ ಹಾಗೂ ಲೆಕ್ಕಪತ್ರದಲ್ಲಿ ವಂಚನೆ ನಡೆಸಲಾಗಿದೆ ಎಂದು ಹಿಂಡನ್ ಬರ್ಗ್ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದು, ಹೀಗಾಗಿ ಆತಂಕಗೊಂಡಿರುವ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಪರಿಣಾಮ ಅದಾನಿ ಸಮೂಹಕ್ಕೆ ಈವರೆಗೆ ಬರೋಬ್ಬರಿ ಐವತ್ತು ಶತಕೋಟಿ ಡಾಲರ್ ನಷ್ಟವಾಗಿದೆ ಎನ್ನಲಾಗಿದೆ.
ಅಲ್ಲದೆ ಅದಾನಿ ಸಮೂಹದಲ್ಲಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಕೂಡ ಹೂಡಿಕೆ ಮಾಡಿದ್ದು, ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೊಡ್ಡ ಮೊತ್ತವನ್ನು ಸಾಲವಾಗಿ ನೀಡಿದೆ. ಇದೀಗ ಅದಾನಿ ಸಮೂಹ, ಹಿಂಡನ್ ಬರ್ಗ್ ಆರೋಪಕ್ಕೆ ಉತ್ತರ ನೀಡಿದ್ದು, ಇದಕ್ಕಾಗಿ 413 ಪುಟಗಳಿಗೂ ಅಧಿಕ ಪ್ರತಿಕ್ರಿಯೆಯನ್ನು ಸಿದ್ಧಪಡಿಸಲಾಗಿದೆ. ಕಾನೂನು ಸಲಹೆ ಪಡೆದುಕೊಂಡ ಬಳಿಕ ಇದನ್ನು ಪ್ರಕಟಿಸಲಾಗಿದೆ.