ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಕುರಿತಂತೆ ಮಾತನಾಡಿದ್ದ ಸೂರಜ್ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣನವರಿಗೆ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂದು ತಿಳಿಸಿದ್ದರು. ಅದರಲ್ಲೂ ಸೂರಜ್ ರೇವಣ್ಣ, ಹಾಸನ ಜಿಲ್ಲೆಯ ರಾಜಕಾರಣ ಕುರಿತಂತೆ ದೇವೇಗೌಡರು ಹಾಗೂ ಹೆಚ್.ಡಿ. ರೇವಣ್ಣನವರದ್ದೇ ಅಂತಿಮ ತೀರ್ಮಾನ ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಚಿಕ್ಕಪ್ಪ ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದ್ದರು.
ಇದಕ್ಕೆ ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ. ಕುಮಾರಸ್ವಾಮಿ, ಕಲಿಯುಗದ ರಾಜಕಾರಣದಲ್ಲಿಯೂ ನೂರಾರು ಶಕುನಿಗಳಿರುತ್ತಾರೆ. ಅದೇ ರೀತಿ ಯಾರೋ ಶಕುನಿ ಮಕ್ಕಳ ತಲೆ ಕೆಡಿಸಿರಬಹುದು. ಆದರೆ ಇದು ಕುಟುಂಬದ ವಿಚಾರವಾಗಿದ್ದು ಟಿಕೆಟ್ ವಿಷಯವಾಗಿ ಮನೆಯಲ್ಲಿ ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬೀದಿಯಲ್ಲಿ ಇದನ್ನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಸೂರಜ್ ಹೇಳಿರುವುದರಲ್ಲಿ ತಪ್ಪೇನು ಇಲ್ಲ ಎಂದು ತಿಳಿಸಿದ ಕುಮಾರಸ್ವಾಮಿಯವರು, ಹೆಚ್.ಡಿ. ರೇವಣ್ಣ ಹಾಸನ ಜಿಲ್ಲೆಯನ್ನು ನೋಡಿಕೊಳ್ಳುತ್ತಾರೆ. ನಾನು ರಾಜ್ಯವನ್ನು ನೋಡಿಕೊಳ್ಳುತ್ತಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 120 ಕ್ಷೇತ್ರಗಳಲ್ಲಿ ಜೆಡಿಎಸ್ ಜಯ ಸಾಧಿಸಬೇಕೆಂಬ ಕಾರಣಕ್ಕೆ ರಾಜ್ಯದಾದ್ಯಂತ ಪಂಚ ರತ್ನ ರಥಯಾತ್ರೆ ಕೈಗೊಂಡಿದ್ದೇನೆ ಎಂದು ಹೇಳಿದರು.