ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ರೀಸರ್ಚ್ ವರದಿ ಬಿಡುಗಡೆಯಾಗುತ್ತಿದ್ದಂತೆ ಭಾರತದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅದಾನಿ ಸಾಮ್ರಾಜ್ಯದಲ್ಲಿ ಅಲ್ಲೋಲಕಲ್ಲೋಲವಾಗಿದೆ. ವರದಿಂದ ಆತಂಕಗೊಂಡಿರುವ ಹೂಡಿಕೆದಾರರು ಅದಾನಿ ಗ್ರೂಪಿಗೆ ಸೇರಿದ ಕಂಪನಿಗಳ ಶೇರ್ ಗಳನ್ನು ಮಾರಾಟ ಮಾಡತೊಡಗಿದ್ದು, ಕಳೆದ ಎರಡು ದಿನಗಳಲ್ಲಿ ಅದಾನಿ ಗ್ರೂಪ್ ಗೆ ಬರೋಬ್ಬರಿ 4.17 ಲಕ್ಷ ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಇದರ ಪರಿಣಾಮ ಗೌತಮ್ ಅದಾನಿ ಅವರ ಸಂಪತ್ತಿನಲ್ಲೂ ಭಾರಿ ಇಳಿಕೆಯಾಗಿದ್ದು, 2.36 ಲಕ್ಷ ಕೋಟಿ ರೂಪಾಯಿ ಕುಸಿತದೊಂದಿಗೆ ಈಗ ಅವರು ವಿಶ್ವ ಕುಬೇರರ ಪಟ್ಟಿಯಲ್ಲಿ 3ರಿಂದ 7ನೇ ಸ್ಥಾನಕ್ಕೆ ಇಳಿದಿದ್ದಾರೆ. ಹಿಂಡನ್ ಬರ್ಗ್ ರೀಸರ್ಚ್ ವರದಿ ಕುರಿತಂತೆ ಅದಾನಿ ಗ್ರೂಪ್ ಸ್ಪಷ್ಟನೆ ನೀಡಿದ್ದು, ಕಂಪನಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈ ವರದಿ ದುರುದ್ದೇಶಪೂರಿತ ಹಾಗೂ ಕುಚೇಷ್ಟೆಯಿಂದ ಕೂಡಿದೆ. ಅಲ್ಲದೆ ಹಿಂಡನ್ ಬರ್ಗ್ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದೆ.
ಆದರೆ ಇಷ್ಟಾದರೂ ಹೂಡಿಕೆದಾರರ ಕಳವಳ ಇನ್ನೂ ಕಡಿಮೆಯಾಗಿಲ್ಲ. ಅಲ್ಲದೆ ಅದಾನಿ ಗ್ರೂಪ್, ಹಿಂಡನ್ ಬರ್ಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರೂ ಸಹ ಆ ಕಂಪನಿ ತನ್ನ ವರದಿಗೆ ಬದ್ಧ. ಜೊತೆಗೆ ಅದಾನಿ ಗ್ರೂಪಿನ ಕಾನೂನು ಸಮರವನ್ನು ಎದುರಿಸಲು ತಾನು ಸಿದ್ಧ ಎಂದು ಹೇಳಿರುವುದು ಹೂಡಿಕೆದಾರರಿಗೆ ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಹಿಂಡನ್ ಬರ್ಗ್ ರಿಸರ್ಚ್ ನ 106 ಪುಟಗಳ ವರದಿ ಈಗ ಅದಾನಿ ಗ್ರೂಪ್ ನ ಷೇರುಗಳ ಬೆಲೆಯಲ್ಲಿ ಭಾರಿ ಇಳಿತಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.