ಲೈಂಗಿಕ ದೌರ್ಜನ್ಯದ ಮಾಡಿದ್ದಾರೆಂದು ಆರೋಪಿಸಿ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಖ್ಯಾತ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಸಹ ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಕುಸ್ತಿಪಟುಗಳು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡುವಂತೆ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಅವರಿಗೆ 72 ಗಂಟೆಗಳ ಗಡುವು ನೀಡಲಾಗಿದ್ದು, ಇಂದು ಸಂಜೆ ಅಂತ್ಯವಾಗಲಿದೆ. ಇದರ ಮಧ್ಯೆ ಬ್ರಿಜ್ ಭೂಷಣ್ ಪ್ರತಿಭಟನಾಕಾರರ ವಿರುದ್ಧ ಕಿಡಿ ಕಾರಿದ್ದಾರೆ.
ಉತ್ತರ ಪ್ರದೇಶದ ನಂದಿನಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಸ್ತಿಪಟುಗಳು ನನ್ನ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಶಾಹೀನ್ ಬಾಗ್ ಮಾದರಿಯ ಧರಣಿ ಎಂದು ಆರೋಪಿಸಿದ್ದಾರಲ್ಲದೆ ಈ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಪಕ್ಷದ ಪಿತೂರಿ ಇದೆ. ನಾನು ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಿಲ್ಲ ಎಂದಿದ್ದಾರೆ.