ಹಿರಿಯರನ್ನು ಗೌರವಿಸುವುದು ಭಾರತದ ಸಂಪ್ರದಾಯ. ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಈ ಗುಣವನ್ನು ಅಳವಡಿಸಿಕೊಳ್ಳಬೇಕು. ಆದ್ರೆ ಸದ್ಯದ ಸ್ಥಿತಿ ನೋಡಿದ್ರೆ ಈ ಸಂಪ್ರದಾಯ ಹಳ್ಳ ಹಿಡಿದಿರೋದಂತೂ ಗ್ಯಾರಂಟಿ. ಯಾಕಂದ್ರೆ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇ.44ರಷ್ಟು ವೃದ್ಧರಿಗೆ ಸಮಾಜದಲ್ಲಿ ಗೌರವ, ಪ್ರೀತಿ, ಕಾಳಜಿ ಸಿಗುತ್ತಿಲ್ಲ.
ಭಾರತೀಯ ಸಮಾಜದಲ್ಲಿ ತಮಗೆ ತಾರತಮ್ಯ ಮಾಡಲಾಗ್ತಿದೆ ಅಂತಾ ಶೇ.53ರಷ್ಟು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ನಿಂದನೆ ಮತ್ತು ಅಯೋಗ್ಯ ವರ್ತನೆಗೆ ತುತ್ತಾಗುತ್ತಿದ್ದೇವೆ ಅಂತಾ ಶೇ.70ರಷ್ಟು ವೃದ್ಧರು ಅಳಲು ತೋಡಿಕೊಂಡಿದ್ದಾರೆ.
35% ವೃದ್ಧರು ತಮ್ಮ ಮಕ್ಕಳಿಂದ ನಿಂದನೆಗೊಳಗಾಗುತ್ತಿದ್ದರೆ, 21 % ಸೊಸೆಯರಿಂದ ನಿಂದನೆಗೊಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
2017 ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ದೆಹಲಿಯ ಮಂದಿ ಮಾತ್ರ ಹಿರಿಯರ ಬಗ್ಗೆ ಕೊಂಚ ಕಳಕಳಿ ಹೊಂದಿದ್ದಾರೆ. ಶೇ.23ರಷ್ಟು ವೃದ್ಧರು ಮಾತ್ರ ತಾವು ಸಮಾಜದಲ್ಲಿ ನಿಂದನೆಗೊಳಗಾಗುತ್ತಿದ್ದೇವೆ ಅಂತಾ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಹಿರಿಯರ ನಿಂದನೆ ಮತ್ತು ಅಗೌರವ ತೋರುವ ಪರಿಪಾಠ ಭುವನೇಶ್ವರದಲ್ಲಿ ಅತಿ ಹೆಚ್ಚು ಅಂದ್ರೆ ಶೇ.92ರಷ್ಟಿದೆ.
ಗುವಾಹಟಿಯಲ್ಲಿ ಶೇ.85ರಷ್ಟು ವೃದ್ಧರು ಸಂಕಷ್ಟ ಅನುಭವಿಸ್ತಾ ಇದ್ರೆ, ಲಖ್ನೋನಲ್ಲಿ ಈ ಪ್ರಮಾಣ ಶೇ.78ರಷ್ಟಿದೆ. ಹೈದ್ರಾಬಾದ್ ನಲ್ಲಿ ಶೇ.74, ಬೆಂಗಳೂರಲ್ಲಿ ಶೇ.71, ಚೆನ್ನೈನಲ್ಲಿ ಶೇ.64, ಕೋಲ್ಕತ್ತಾದಲ್ಲಿ ಶೇ.62 ಮುಂಬೈನಲ್ಲಿ ಶೇ.61 ಹಾಗೂ ದೆಹಲಿಯಲ್ಲಿ ಶೇ.16ರಷ್ಟು ಮುದಿ ಜೀವಗಳು ಅಭದ್ರತೆಯ ಬದುಕು ಸಾಗಿಸುತ್ತಿದ್ದಾರೆ. ವಿಶ್ವ ಹಿರಿಯರ ನಿಂದನಾ ಜಾಗೃತಿ ದಿನದ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.