ಕೇರಳ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ಸಿಗಲಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್. ಬಿಂದು ಘೋಷಿಸಿದ್ದಾರೆ. ಮುಟ್ಟಿನ ರಜೆ ಸೇರಿದಂತೆ ವಿದ್ಯಾರ್ಥಿನಿಯರ ಅಗತ್ಯ ಹಾಜರಾತಿಯು ಶೇ. 73 ರಷ್ಟಿದ್ದರೆ ಅವರು ಪರೀಕ್ಷೆಗೆ ಹಾಜರಾಗಬಹುದು. ಈ ಹಿಂದೆ ವಿದ್ಯಾರ್ಥಿನಿಯರ ಹಾಜರಾತಿ 75% ಕಡ್ಡಾಯವಾಗಿತ್ತು.
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯವನ್ನು (CUSAT) ಅನುಸರಿಸಿ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಋತುಚಕ್ರದ ರಜೆಯನ್ನು ನೀಡಲು ಪರಿಗಣಿಸುವುದಾಗಿ ಕೇರಳ ಸರ್ಕಾರವು ಈ ಹಿಂದೆ ಘೋಷಿಸಿದ ನಂತರ 60 ದಿನಗಳ ಮಾತೃತ್ವ ರಜೆ ಘೋಷಣೆ ಬಂದಿದೆ.
CUSAT ಶನಿವಾರ (ಜನವರಿ 14) ತನ್ನ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡುವುದಾಗಿ ಘೋಷಿಸಿತು. ಋತುಸ್ರಾವದ ಸಮಯದಲ್ಲಿ ವಿದ್ಯಾರ್ಥಿನಿಯರು ಎದುರಿಸುವ ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಪರಿಗಣಿಸಿ, ಕೇರಳ ಸರ್ಕಾರವು ಇದನ್ನು ರಾಜ್ಯ ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ಬಿಂದು ತಮ್ಮ ಕಚೇರಿಯಿಂದ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.