ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಪ್ರಧಾನಿ ಮೋದಿ ಲಂಬಾಣಿ ತಾಂಡಾ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಿದರು.
ಮಳಖೇಡ ಗ್ರಾಮದಲ್ಲಿ ಘೋರ್ ಬಂಜಾರ್ ನಗಾರ್ ಬಾರಿಸುವ ಮೂಲಕ ಪ್ರಧಾನಿ ಮೋದಿ ಬಂಜಾರಾ ಸಮುದಾಯಕ್ಕೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಸಾಂಕೇತಿಕವಾಗಿ ಐದು ಜನರಿಗೆ ಪ್ರಧಾನಿ ಮೋದಿ ಹಕ್ಕು ಪತ್ರ ವಿತರಿಸಿದರು. ಈ ಮೂಲಕ 51,000 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಲಂಬಾಣಿ ಜನರ ಮನೆಯಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಂದು 51,000ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದ್ದು ಮುಂದಿನ ತಿಂಗಳು ಉಳಿದವರಿಗೆ ನೀಡಲಾಗುವುದು ಎಂದು ಹೇಳಿದರು.