ದರೋಡೆಗೆಂದೇ ಬ್ಯಾಂಕ್ ಗೆ ನುಗ್ಗಿದ ಮೂವರು ಶಸ್ತ್ರಸಜ್ಜಿತ ದರೋಡೆಕೋರರನ್ನ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಸಮರ್ಥವಾಗಿ ಎದುರಿಸಿದ್ದಾರೆ. ಬ್ಯಾಂಕ್‌ಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದಾಗ ಬಿಹಾರದ ಹಾಜಿಪುರದ ಬ್ಯಾಂಕ್‌ನಲ್ಲಿ ಕಾವಲು ಕಾಯುತ್ತಿದ್ದ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಒಂದು ಸೆಕೆಂಡ್ ಕೂಡ ಹಿಂಜರಿಯದೆ ಕಳ್ಳರನ್ನ ಓಡಿಸಿದ್ದಾರೆ.
ಜೂಹಿ ಕುಮಾರಿ ಮತ್ತು ಶಾಂತಿ ಕುಮಾರಿ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂಡುವರಿ ಚೌಕ್‌ನಲ್ಲಿರುವ ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನ ಪ್ರವೇಶ ದ್ವಾರದಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಮೂವರು ಪುರುಷರು ಬ್ಯಾಂಕ್ ಪ್ರವೇಶಿಸಲು ಪ್ರಯತ್ನಿಸಿದರು. ಅವರಿಗೆ ತಮ್ಮ ದಾಖಲೆಗಳನ್ನು ತೋರಿಸಲು ಕೇಳಿದಾಗ ಓರ್ವ ಪಿಸ್ತೂಲ್ ತೆಗೆದು ಗುಂಡು ಹಾರಿಸಲು ಮುಂದಾದರು.
ಈ ವೇಳೆ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳಾದ ಜೂಹಿ ಮತ್ತು ಶಾಂತಿ ಧೈರ್ಯದಿಂದ ಅವರನ್ನು ಎದುರಿಸಿದ್ದಾರೆ. ಈ ವೇಳೆ ಜೂಹಿ ಗಾಯಗೊಂಡಿದ್ದಾರೆ. ದರೋಡೆಕೋರರು ಕಾನ್ಸ್ ಟೇಬಲ್ ಗಳ ರೈಫಲ್ಸ್ ಕಿತ್ತುಕೊಳ್ಳಲು ಪ್ರಯತ್ನಿಸಿದರೂ ಅವರನ್ನು ಹಿಮ್ಮೆಟ್ಟಿಸಿದರು. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸರು ಇದೀಗ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದು, ದರೋಡೆ ಯತ್ನದ ಕುರಿತು ತನಿಖೆ ನಡೆಸುತ್ತಿದ್ದಾರೆ. ದರೋಡೆಕೋರರನ್ನು ಎದುರಿಸಿದ ಕಾನ್‌ಸ್ಟೆಬಲ್‌ಗಳಿಗೆ ಬಹುಮಾನ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಹೇಳಿದ್ದಾರೆ.