ಇದು ಆನ್‌ಲೈನ್ ಶಾಪಿಂಗ್ ಝಮಾನಾ. ಬಹುತೇಕ ಎಲ್ಲರೂ ಈಗ ಅದನ್ನೇ ನೆಚ್ಚಿಕೊಂಡಿದ್ದಾರೆ. ಆನ್‌ಲೈನ್ ಶಾಪಿಂಗ್‌ಗಾಗಿ ಡೆಬಿಟ್ ಕಾರ್ಡ್‌ಗಳನ್ನು ಸಹ ಬಳಸುತ್ತಾರೆ. ಆದರೆ ಆನ್‌ಲೈನ್ ಶಾಪಿಂಗ್‌ಗಾಗಿ ಡೆಬಿಟ್ ಕಾರ್ಡ್‌ಗಳನ್ನು ಬಳಸುವುದು ಸುರಕ್ಷಿತವೇ? ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿದಾಗ, ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ತಕ್ಷಣವೇ ಕಡಿತಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಕಾರ್ಡ್ ಮತ್ತು ಬ್ಯಾಂಕ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ಕದಿಯಬಹುದಾದ ಅಪಾಯವಿರುತ್ತದೆ.
ಡೆಬಿಟ್ ಕಾರ್ಡ್ ಅನ್ನು ಬಳಸುವುದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವಂಚಕರು ದೋಚುವ ಸಾಧ್ಯತೆ ಇರುತ್ತದೆ. ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ? ಡೆಬಿಟ್ ಕಾರ್ಡ್ ಅನ್ನು ಸುರಕ್ಷಿತವಾಗಿ ಹೇಗೆ ಬಳಕೆ ಮಾಡಬಹುದು ಅನ್ನೋದನ್ನು ನೋಡೋಣ. ಡೆಬಿಟ್ ಕಾರ್ಡ್ ಕಳೆದುಹೋದರೆ ಅಥವಾ ಯಾರಾದರೂ ಕದ್ದಿದ್ದರೆ, ಅದನ್ನು ಮೋಸದಿಂದ ಬಳಸಿದರೆ ತಕ್ಷಣವೇ ನಿಮ್ಮ ಬ್ಯಾಂಕ್‌ಗೆ ತಿಳಿಸಿ. ಆನ್‌ಲೈನ್ ಅಥವಾ ವೈಯಕ್ತಿಕ ಖರೀದಿಗಳಿಗೆ ಡೆಬಿಟ್ ಕಾರ್ಡ್‌ಗಳನ್ನು ಬಳಸುವುದು ಸುರಕ್ಷಿತ. ಆದರೂ ವಹಿವಾಟಿನ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.
ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ನಿರಂತರವಾಗಿ ಪರಿಶೀಲಿಸುತ್ತಿರಿ. ವಾರಕ್ಕೊಮ್ಮೆ ಅಥವಾ ಪ್ರತಿದಿನವೂ ನಿಮ್ಮ ಬ್ಯಾಂಕ್ ಖಾತೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದನ್ನು ಮಾಡುವುದರಿಂದ ದೈನಂದಿನ ವಹಿವಾಟಿನ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ವಂಚನೆಯನ್ನು ಸಹ ತಪ್ಪಿಸಬಹುದು. ಡೆಬಿಟ್ ಕಾರ್ಡ್ ಕೂಡ ಪಿನ್ ಅನ್ನು ಹೊಂದಿರುತ್ತದೆ. ಈ ಪಿನ್ ನಂಬರ್ ನೆನಪಿಟ್ಟುಕೊಳ್ಳಿ. ಅದನ್ನು ನಿಮ್ಮ ಪರ್ಸ್ ಅಥವಾ ವ್ಯಾಲೆಟ್‌ನಲ್ಲಿ ಎಲ್ಲಿಯೂ ಬರೆದಿಟ್ಟುಕೊಳ್ಳಬೇಡಿ.
ಸಾಧ್ಯವಾದರೆ ಪಿನ್ ಅನ್ನು ನೀವು ಮಾತ್ರ ಪ್ರವೇಶಿಸಬಹುದಾದ ಸ್ಥಳದಲ್ಲಿ ಸೇವ್ ಮಾಡಿಕೊಳ್ಳಿ. ನಿಮ್ಮ ಯಾವುದೇ ಮೇಲ್‌ಗಳಲ್ಲಿ ನೀವು ಪಿನ್ ಅನ್ನು ಸೇವ್ ಮಾಡಬಹುದು. ನಿಮ್ಮ ವ್ಯಾಲೆಟ್ ಅನ್ನು ಯಾರಾದರೂ ಕದ್ದಿದ್ದರೆ ಮತ್ತು ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳು ಕಳೆದು ಹೋದರೆ ಅದನ್ನು ತಕ್ಷಣವೇ ವರದಿ ಮಾಡಬೇಕು. ಯಾವುದೇ ಅನಧಿಕೃತ ವಹಿವಾಟು ನಡೆದರೂ ಕೂಡಲೇ ಬ್ಯಾಂಕ್‌ಗೆ ತಿಳಿಸಿ. ಈ ಮೂಲಕ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.