
ಬೆಂಗಳೂರಿನ ಅರಮನೆ ಮೈದಾನದಲ್ಲಿ ʼನಾ ನಾಯಕಿʼ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ರಾಜ್ಯ ಬಿಜೆಪಿ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ, ಹಗರಣಗಳು ನಡೆಯುತ್ತಿರುವ ಬಗ್ಗೆ ಕೇಳಿದ್ದೇನೆ. ಪಿಎಸ್ಐ ನೇಮಕಾತಿ, ಶಿಕ್ಷಕರ ನೇಮಕಾತಿ, ಕೋವಿಡ್ ವೇಳೆ ಔಷಧಗಳಲ್ಲಿಯೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಮಾಹಿತಿಯಿದೆ. ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಳಿಬಂದಿದೆ. ಜನರ ಸಮಸ್ಯೆ ಬಗೆಹರಿಸುವಲ್ಲಿ, ಯುವಕರಿಗೆ ಉದ್ಯೋಗ ನೀಡುವಲ್ಲಿ, ಅಗತ್ಯ ವಸ್ತುಗಳ ಬೆಲೆ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಹಿಳೆಯರು, ರೈತರು, ಬಡವರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮಹಿಳೆಯರು ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ. ನಿಮ್ಮ ಅಸ್ತಿತ್ವಕ್ಕಾಗಿ ಜಾಗೃತರಾಗಬೇಕಾದ ಅಗತ್ಯವಿದೆ. ಮಹಿಳಾಪರ ಯೋಜನೆಗಳನ್ನು ಜಾರಿಗೆ ತರಲು, ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.

