ಸುಂದರ ಮುಖ ಹಾಗೂ ದಟ್ಟ, ಕಪ್ಪು ಕೂದಲನ್ನು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳನ್ನು ಖರೀದಿ ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ಸುಲಭ ಪದಾರ್ಥದಿಂದ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಸಾಮಾನ್ಯವಾಗಿ ವೀಳ್ಯದೆಲೆ ಎಲ್ಲರಿಗೂ ಗೊತ್ತು. ಇದನ್ನು ಪೂಜೆಗೆ ಹಾಗೂ ಅಡಿಕೆ ಜೊತೆ ಕವಳದ ರೂಪದಲ್ಲಿ ಸೇವನೆ ಮಾಡ್ತಾರೆ.
ಈ ವೀಳ್ಯದೆಲೆಯಲ್ಲಿ ಸಾಕಷ್ಟು ಸೌಂದರ್ಯ ವೃದ್ಧಿಸುವ ಗುಣವಿದೆ. ಇದು ಕೂದಲುದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ವೀಳ್ಯದೆಲೆಯನ್ನು ಪೇಸ್ಟ್ ಮಾಡಿ. ಅದಕ್ಕೆ ತೆಂಗಿನ ಎಣ್ಣೆ ಅಥವಾ ಎಳ್ಳಿನ ಎಣ್ಣೆ ಬೆರೆಸಿ ತೆಲೆಯ ಬುಡಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ನಂತ್ರ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಮಾಡುವುದ್ರಿಂದ ಕೂದಲುದುರುವುದು ಕಡಿಮೆಯಾಗುತ್ತದೆ.
ವೀಳ್ಯದೆಲೆ ಮುಖದ ಮೇಲಿನ ಗುಳ್ಳೆ ಹಾಗೂ ಮೊಡವೆಗಳನ್ನು ಕಡಿಮೆ ಮಾಡುತ್ತದೆ.ವೀಳ್ಯದೆಲೆ ಪೇಸ್ಟ್ ಗೆ ಅರಿಶಿನ ಹಾಕಿ ಕಲೆಯ ಜಾಗಕ್ಕೆ ಹಚ್ಚಿ. ಐದು ನಿಮಿಷದ ನಂತ್ರ ಮುಖವನ್ನು ಸ್ವಚ್ಛಗೊಳಿಸಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ಮುಖದ ಮೇಲಿನ ಕಲೆ ಮಂಗಮಾಯ.
ಕೆಲವರ ಬೆವರು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಇದು ಮುಜುಗರಕ್ಕೆ ಕಾರಣವಾಗುತ್ತದೆ. ಅಂತವರು ವೀಳ್ಯದೆಲೆ ಬಳಸಬೇಕು. ಸ್ನಾನದ ನೀರಿಗೆ ವೀಳ್ಯದೆಲೆ ಯನ್ನು ಹಾಕಿ ಸ್ನಾನ ಮಾಡಿದ್ರೆ ದುರ್ಗಂದ ಬರುವುದಿಲ್ಲ.
ಚಳಿಗಾಲದಲ್ಲಿ ಚರ್ಮ ಶುಷ್ಕವಾಗುತ್ತದೆ. ಇದನ್ನು ತಪ್ಪಿಸಲು ವೀಳ್ಯದೆಲೆಗಳನ್ನು ನೀರಿನಲ್ಲಿ ಕುದಿಸಬೇಕು. ಆ ನೀರನ್ನು ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡಬೇಕು.