ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಆಯ್ತು ಈಗ ಮಸೀದಿ ಪಾಲಿಟಿಕ್ಸ್ ಆರಂಭವಾಗಿದೆ.
ಬೆಳಗಾವಿಯ ಸಾರಥಿ ನಗರದಲ್ಲಿ ಮನೆಯನ್ನೇ ಫಾತೀಮಾ ಮಸೀದಿಯನ್ನಾಗಿ ನಿರ್ಮಾಣ ಮಾಡಿ ವಕ್ಫ್ ಬೋರ್ಡ್ ಗೆ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮಸೀದಿ ತೆರವಿಗೆ ಆಗ್ರಹಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಒತ್ತಡ ಹೇರಿದ್ದಾರೆ.
ಚಾಲಕರ ರಹವಾಸಿಗಳ ಸಂಘದಿಂದ ವಸತಿಗಾಗಿ ನಿವೇಶನವನ್ನು ಹಂಚಿಕೆ ಮಾಡಲಾಗಿತ್ತು. ವಸತಿ ಯೋಜನೆಗೆ ಮೀಸಲಿಟ್ಟ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಮನೆಯಲ್ಲಿ ಮಸೀದಿ ನಿರ್ಮಿಸಲಾಗಿದ್ದು, ಮಸೀದಿ ತೆರವುಗೊಳಿಸುವಂತೆ ಒತ್ತಾಯಗಳು ಕೇಳಿಬಂದಿವೆ. ಇನ್ನೊಂದೆಡೆ ಮಸೀದಿ ತೆರವಿಗೆ ಶ್ರೀರಾಮ ಸೇನೆ ವಾರದ ಗಡುವು ನೀಡಿದೆ. ಒಟ್ಟಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇದೀಗ ಮಸೀದಿ ವಿವಾದ ತೀವ್ರಗೊಂಡಿದೆ.