ಜನವರಿ 15 ರಂದು ದೇಶದಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಲಾಗ್ತಿದೆ. ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.
ಆಚರಣೆ ಕೂಡ ಭಿನ್ನವಾಗಿರುತ್ತದೆ. ಹಬ್ಬದ ಸಂದರ್ಭದಲ್ಲಿ ಚಳಿಯ ವಾತಾವರಣವಿರೋದ್ರಿಂದ ಆರೋಗ್ಯದ ಬಗ್ಗೆ ಕೂಡ ಗಮನ ನೀಡಬೇಕಾಗುತ್ತದೆ. ಹಿಂದಿನ ಕಾಲದಿಂದಲೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡೇ ಹಬ್ಬಕ್ಕೆ ವಿಶೇಷ ತಿಂಡಿಗಳನ್ನು ತಯಾರಿಸಲಾಗ್ತಿತ್ತು.
ಬೆಲ್ಲದಿಂದ ಮಾಡಿದ ಆಹಾರ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಿಡುವ ಕಾರ್ಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನೂ ಸುಲಭಗೊಳಿಸುತ್ತದೆ. ಎಳ್ಳು ಬೆಲ್ಲವನ್ನು ಬೆರೆಸಿ ಉಂಡೆ ಮಾಡಿ ಸಂಕ್ರಾಂತಿಯಂದು ಹಂಚಲಾಗುತ್ತದೆ. ಇದು ಚಳಿಗಾಲದಲ್ಲಿ ಕಾಡುವ ಅನಾರೋಗ್ಯವನ್ನು ತಡೆಯುವ ಕೆಲಸ ಮಾಡುತ್ತದೆ.
ಎಳ್ಳು ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಒಳ್ಳೆಯದು. ಇದು ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ. ಜೀರ್ಣಾಂಗ ಕ್ರಿಯೆಯನ್ನು ಆರೋಗ್ಯವಾಗಿರಿಸುತ್ತದೆ. ಎಳ್ಳಿನಿಂದ ಮಾಡಿದ ಸಿಹಿಯನ್ನು ಸಂಕ್ರಾಂತಿಯಂದು ಇದೇ ಕಾರಣಕ್ಕೆ ತಿನ್ನಲಾಗುತ್ತದೆ.
ಶೇಂಗಾ ಉಂಡೆಯನ್ನು ಕೂಡ ಸಂಕ್ರಾಂತಿ ಸಂದರ್ಭದಲ್ಲಿ ತಿನ್ನಬಹುದು. ಶೇಂಗಾ ಚಳಿಗಾಲದಲ್ಲಿ ದೇಹವನ್ನು ಶೀತದಿಂದ ರಕ್ಷಿಸುವ ಜೊತೆಗೆ ಅಗತ್ಯವಾದ ಕೊಬ್ಬನ್ನು ನೀಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ತುಪ್ಪದಲ್ಲಿದೆ. ಹಾಗಾಗಿ ಚಳಿಗಾಲದಲ್ಲಿ ತುಪ್ಪವನ್ನು ಅಗತ್ಯವಾಗಿ ಸೇವನೆ ಮಾಡಬೇಕು. ಪ್ರತಿದಿನ ಒಂದು ಚಮಚ ತುಪ್ಪ ನಮ್ಮ ದೇಹ ಸೇರಬೇಕು.
ಒಣ ಹಣ್ಣುಗಳು ದೇಹವನ್ನು ಬೆಚ್ಚಗಿಡುವ ಕೆಲಸ ಮಾಡುತ್ತವೆ. ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಒಳ್ಳೆಯದಾದ ಒಣ ಹಣ್ಣುಗಳನ್ನು ಸಂಕ್ರಾಂತಿ ಸಂದರ್ಭದಲ್ಲಿ ಅವಶ್ಯವಾಗಿ ಸೇವನೆ ಮಾಡಿ.
ಈ ದಿನವನ್ನು ಸುಗ್ಗಿಯಾಗಿ ಆಚರಣೆ ಮಾಡಲಾಗುತ್ತದೆ. ಹಬ್ಬದಂದು ಕಿಚಡಿ ತಿನ್ನುವ ಸಂಪ್ರದಾಯವಿದೆ. ಕಿಚಡಿ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಹಬ್ಬದಂದು ಇದನ್ನು ಅವಶ್ಯವಾಗಿ ಸೇವನೆ ಮಾಡಬೇಕು.