ಶಿವಮೊಗ್ಗ: ಸ್ಯಾಂಟ್ರೋ ರವಿ ವಿಚಾರ ನಾನು ಸಂಪೂರ್ಣ ತಿಳಿದುಕೊಂಡಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದರು. ಬಿಗಿಯಾದ ಕ್ರಮ ತೆಗೆದುಕೊಂಡು ತಕ್ಕ ಪಾಠ ಕಲಿಸುವ ಪ್ರಯತ್ನ ಸರ್ಕಾರ ಮಾಡಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.
ಹಲವಾರು ಸಚಿವರ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಸತ್ಯಾಸತ್ಯತೆ ತನಿಖೆಯಾದ ಬಳಿಕ ಹೊರಬರಲಿದೆ. ಯಾರೇ ಏನೇ ಹೇಳಬಹುದು. ಆದರೆ, ಸ್ಯಾಂಟ್ರೋ ರವಿ ವಿರುದ್ಧ ಖಂಡಿತ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದರು.
ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇವತ್ತಲ್ಲ ನಾಳೆ ಸಂಪುಟ ವಿಸ್ತರಣೆ ಮಾಡಬೇಕೆಂದು ಚರ್ಚೆ ನಡೆಯುತ್ತಿದೆ. ವಿಸ್ತರಣೆಯಾಗುತ್ತೆ ಅನ್ನೋದಷ್ಟೇ ಗೊತ್ತು. ಆದರೆ ಕಾದು ನೋಡಬೇಕಿದೆ. ಈಶ್ವರಪ್ಪ ಸಂಪುಟ ಸೇರುವ ಬಗ್ಗೆ ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಆದರೆ, ಅವರು ಸಂಪುಟ ಸೇರಬೇಕೆಂಬ ಅಪೇಕ್ಷೆ ಇದೆ ಎಂದರು.
ನಿನ್ನೆಯ ಕಾಂಗ್ರೆಸ್ ನ ಎಸ್.ಸಿ. ಎಸ್.ಟಿ. ಸಮಾವೇಶ ಕುರಿತು ಪ್ರತಿಕ್ರಿಯೆ ನೀಡಿ, ಅವರ ಸಮಾವೇಶಕ್ಕೆ ಬೆಲೆ ಎಲ್ಲಿದೆ? ಬಿಜೆಪಿ ಮಾಡುವ ಪ್ರತಿಯೊಂದು ಕೆಲಸಕ್ಕೂ ಟೀಕೆ ಮಾಡಿಕೊಂಡು ಎಸ್.ಸಿ., ಎಸ್.ಟಿ. ಬಗ್ಗೆ ಮಾಡಿರುವ ತೀರ್ಮಾನವನ್ನು ತಿರುಚಿ ಮನಬಂದಂತೆ ಒಬ್ಬ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡುವುದು ಎಷ್ಟು ಗೌರವ ಬರುತ್ತೆ ಎಂಬುದು ಅರ್ಥವಾಗದ ವಿಷಯ. ಅವರಿಂದ ಈ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ. ವಾಸ್ತವ ಸಂಗತಿ ಇಟ್ಟುಕೊಂಡು ಮಾತನಾಡಲಿ. ನೀವಂತೂ ಮೀಸಲಾತಿ ನೀಡಲಿಲ್ಲ, ನಾವು ಮಾಡಿದ್ದನ್ನು ಸ್ವಾಗತ ಮಾಡಬೇಕಿತ್ತು. ಟೀಕೆ ಟಿಪ್ಪಣಿ ಮಾಡುವಂತದ್ದು, ಅವರಿಗೆ ಗೌರವ ತರುವಂತದ್ದಲ್ಲ. ಮೀಸಲಾತಿ ಬಗ್ಗೆ ಯಾವುದೇ ಗೊಂದಲ ಇಲ್ಲ.ನಮ್ಮ ನಿಲುವು ಸ್ಪಷ್ಟವಾಗಿದೆ. ಅದರಂತೆ ನಾವು ಮುಂದೆ ಹೋಗುತ್ತೆವೆ ಎಂದು ಹೇಳಿದರು.