ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಷೇತ್ರ ದೂರವಿದ್ದರೆ ಪದೇ ಪದೇ ಭೇಟಿ ನೀಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಕ್ಷೇತ್ರವನ್ನು ಅವರು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿಯೇ ಅವರ ಅಭಿಮಾನಿಗಳು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂದು ಒತ್ತಾಯಿಸುತ್ತಿದ್ದು, ಈಗಾಗಲೇ ಅಲ್ಲಿಗೆ ಭೇಟಿ ನೀಡಿ ಮುಖಂಡರ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಇದರ ಮಧ್ಯೆ ನಾಳೆ ಮತ್ತೆ ಕೋಲಾರಕ್ಕೆ ಭೇಟಿ ನೀಡಲು ಅವರು ಮುಂದಾಗಿದ್ದು, ಬಹುತೇಕ ಮುಂಬರುವ ಚುನಾವಣೆಯಲ್ಲಿನ ತಮ್ಮ ಸ್ಪರ್ಧೆ ಕುರಿತು ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತಮ್ಮ ತಂದೆಯವರಿಗಾಗಿ ಕ್ಷೇತ್ರ ತ್ಯಾಗ ಮಾಡುವುದಾಗಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿರುವರಾದರೂ ವರುಣಾದಿಂದ ಈ ಬಾರಿಯೂ ಯತೀಂದ್ರ ಸ್ಪರ್ಧಿಸಲಿ ಎಂಬ ಇಚ್ಛೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ತಾವು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತಂತೆ ಸಿದ್ದರಾಮಯ್ಯನವರು ನಾಳಿನ ಸಭೆಯಲ್ಲಿ ಬಹಿರಂಗಪಡಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.