ಉಡುಪಿ: ಉಡುಪಿಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದ ಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದ್ದು, ಸೂತಕದ ನಡುವೆ ಕೋಲ ನಡೆಸದಿರಲು ತೀರ್ಮಾನಿಸಲಾಗಿದೆ.
ದೈವಸ್ಥಾನದ ಸಮಿತಿ ಜಯಪೂಜಾರಿ ನಿಧನ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ನೇಮೋತ್ಸವವನ್ನು ಮುಂದೂಡಲು ತೀರ್ಮಾನಿಸಲಾಗಿತ್ತು. ಆದರೆ ಪ್ರಕಾಶ್ ಶೆಟ್ಟಿ ನೇತೃತ್ವದ ಟ್ರಸ್ಟ್ ಇಂದೇ ನೇಮೋತ್ಸವ ನಡೆಸಬೇಕು ಎಂದು ಪಟ್ಟು ಹಿಡಿದಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇಂದು ನಡೆದ ಸಭೆಯಲ್ಲಿ ಪ್ರಕಾಶ್ ಶೆಟ್ಟಿ ತಮ್ಮ ಹಠವನ್ನು ಕೈಬಿಟ್ಟು ನೇಮೋತ್ಸವ ನಡೆಸುವ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ.
ಈ ಹಿನ್ನೆಲೆಯಲ್ಲಿ ದೈವಸ್ಥಾನದ ಎದುರು ನಿಂತು ಸಾಮೂಹಿಕ ಪ್ರಾರ್ಥನೆ ಮಾಡಿದ ಟ್ರಸ್ಟ್ ಸದಸ್ಯರು ಯಾವುದೇ ದೋಷ ಬರದಂತೆ ನೋಡಿಕೊಳ್ಳುವಂತೆ ಪ್ರಾರ್ಥನೆ ಮಾಡಿ ದೈವಕ್ಕೆ ಅಡ್ಡಬಿದ್ದು ನಮಸ್ಕಾರ ಮಾಡಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.