2024ರ ಜನವರಿ 1ರ ವೇಳೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಸಿದ್ಧವಾಗಿರಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಕುರಿತಂತೆ ಕಿಡಿ ಕಾರಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಘೋಷಣೆ ಮಾಡಲು ನೀವೇನು ಪೂಜಾರಿಯೇ ಅಥವಾ ಮಹಾಂತರೇ ಎಂದು ಪ್ರಶ್ನಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಅಂಗವಾಗಿ ಪಾಣಿಪತ್ ನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು, ಪ್ರತಿಯೊಬ್ಬರಿಗೂ ದೇವರ ಮೇಲೆ ನಂಬಿಕೆ ಇದೆ. ತ್ರಿಪುರಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಹಾಗೂ 2024ರಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವಾಗ ನೀವು ಈ ಘೋಷಣೆ ಮಾಡಿದ್ದರ ಹಿಂದಿನ ಕಾರಣವೇನು ಎಂದು ಮಲ್ಲಿಕಾರ್ಜುನ ಖರ್ಗೆ ಕೇಳಿದ್ದಾರೆ.
ನೀವು ರಾಜಕಾರಣಿ, ಹಾಗೆಯೇ ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದೀರಿ. ದೇಶದ ರಕ್ಷಣೆ, ಅಭಿವೃದ್ಧಿ ನಿಮ್ಮ ಕರ್ತವ್ಯವೇ ಹೊರತು ರಾಮ ಮಂದಿರ 2024ರ ಜನವರಿ ವೇಳೆಗೆ ಸಿದ್ಧವಾಗಿರುತ್ತದೆ ಎಂದು ಹೇಳಲು ನೀವು ಪೂಜಾರಿಯೂ ಅಲ್ಲ ಅಥವಾ ಮಹಾಂತರೂ ಅಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಹೇಳಿದ್ದಾರೆ.