
ಆತ ಲೋಕೋಪಯೋಗಿ ಸಚಿವರಿಗೆ ಹಣ ಕೊಡಲು ಹೋಗಿದ್ದಾ? ಸಿಎಂ ಅವರಿಗಾ? ಎಂಬ ಸಿದ್ದರಾಮಯ್ಯ ಟೀಕೆಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಸಿ. ಪಾಟೀಲ್, ವಿಧಾನಸೌಧದಲ್ಲಿ ವಿಪಕ್ಷ ನಾಯಕರೂ ಇರುತ್ತಾರೆ. ಆ ಹಣವನ್ನು ಸಿದ್ದರಾಮಯ್ಯನವರಿಗೆ ಕೊಡಲು ತಂದಿರಬಹುದು ಎಂದು ನಾನೂ ಹೇಳಬಹುದಲ್ಲಾ? ಎಂದು ಪ್ರಶ್ನಿಸಿದ್ದಾರೆ.
ಹಣ ಕೊಡೋದಿದ್ದರೆ ಆತ ವಿಧಾನಸೌಧಕ್ಕೆ ಬರಬೇಕಿತ್ತಾ? ಬೇರೆ ಕಡೆಯು ಕೊಡಬಹುದಿತ್ತಲ್ಲಾ…? ಎಇ ಜಗದೀಶ್ ಗೂ ನನಗೂ ಯಾವುದೇ ರೀತಿ ಸಂಬಂಧವಿಲ್ಲ. ಆರೋಪ ಮಾಡಲು ವಿಪಕ್ಷದವರಿಗೆ ಇದೊಂದು ಅವಕಾಶ. ನಾನು ಇದರ ಹೊಣೆ ಯಾಕೆ ಹೊತ್ತುಕೊಳ್ಳಲಿ ? ದುಡ್ದು ಸಿಕ್ಕಿದ್ದು ವಿಧಾನಸೌಧದ ಆವರಣದ ಹೊರಗೆ ಹಣಕ್ಕೆ ಸೂಕ್ತ ದಾಖಲಾತಿ ಕೊಡದಿದ್ದರೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಅವರು ಹಣ ಯಾಕೆ ತೆಗೆದುಕೊಂಡು ಬರುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳು ಅವರನ್ನು ಬಂಧಿಸುವಂತೆ ಸೂಚಿಸಿದ್ದರು. ಅದರಂತೆ ಹಣ ತಂದಿದ್ದ ಜಗದೀಶ್ ರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತನಿಖಾ ವರದಿ ಬಂದ ಬಳಿಕ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

