“ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ” ಅಂತ ಹೇಳ್ತಾ ಮನೆ ಮನೆಗೆ ಎಳ್ಳು- ಬೆಲ್ಲ, ಕಬ್ಬು ಕೊಟ್ಟು ಸ್ನೇಹ, ಪ್ರೀತಿಯ ಬಾಂಧವ್ಯ ಬೆಸೆಯುವ ಹಬ್ಬ ಸಂಕ್ರಾಂತಿ. ರೈತಾಪಿ ವರ್ಗಕ್ಕೆ ಈ ಹಬ್ಬವೆಂದರೆ ಅತಿ ಹೆಚ್ಚು ಸಂಭ್ರಮ ಸಡಗರ.
ನಗರವಾಸಿಗಳಿಗೆ ಸಂಕ್ರಾತಿ ಹಬ್ಬ ಎಂದರೆ ಪೂಜೆ, ಪೊಂಗಲ್ ನೈವೇದ್ಯ ಹಾಗೂ ಎಳ್ಳು ಬೆಲ್ಲ ಬೀರುವುದಕ್ಕೆ ಸೀಮಿತ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಾಯಿಸುವ ಈ ಪರ್ವ ದಿನದಂದು ಮನೆಮನೆಗೂ ಎಳ್ಳು ಬೆಲ್ಲ ಬೀರಿ ಹೆಂಗಳೆಯರು ಸಂಭ್ರಮ ಪಡುತ್ತಾರೆ. ಹೀಗೆ ಎಳ್ಳು ಬೀರುವಾಗ ಪ್ಲಾಸ್ಟಿಕ್ ಡಬ್ಬಿ ಅಥವಾ ಪ್ಲಾಸ್ಟಿಕ್ ಕವರ್ ನ ಬಳಕೆಯಾಗುವುದು ಹೆಚ್ಚು.
ನೆಲಮೂಲ ಸಂಸ್ಕೃತಿಯ ಹಬ್ಬವಾದ ಸಂಕ್ರಾತಿಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸುವ ಪ್ರಯತ್ನ ನೀವೂ ಮಾಡಬಹುದು. ಸುಲಭವಾಗಿ ಸಿಗುವ ಮಣ್ಣಿನ ಕುಡಿಕೆಗಳನ್ನು ಈಗಲೇ ಖರೀದಿಸಿ ಅದರ ಮೇಲೆ ನಿಮಗೆ ಬೇಕಾದ ಹಾಗೆ ಬಣ್ಣಗಳಿಂದ ಚಿತ್ತಾರ ಬಿಡಿಸಿ. ನೀವೇ ಅಲಂಕರಿಸಿದ ಕಲಾತ್ಮಕ ಕುಡಿಕೆಯಲ್ಲಿ ಎಳ್ಳು ಬೆಲ್ಲ ಬೀರಿ ಪರಿಸರಕ್ಕೆ ಕೊಡುಗೆ ನೀಡಿ.
ಪ್ಲಾಸ್ಟಿಕ್ ಮುಕ್ತ ಸಂಕ್ರಾಂತಿ ನಿಮ್ಮಿಂದ ಶುರುವಾಗಲಿ, ಬೇರೆಯವರಿಗೂ ಇದು ಮಾದರಿಯಾಗಲಿ.