HomeKarnatakaಎಟಿಎಂ ನಿಂದ ಹಣ ಬರದೇ ಖಾತೆಯಿಂದ 20 ಸಾವಿರ ರೂ. ಕಡಿತ: ಗ್ರಾಹಕನಿಗೆ 2.24 ಲಕ್ಷ...

ಎಟಿಎಂ ನಿಂದ ಹಣ ಬರದೇ ಖಾತೆಯಿಂದ 20 ಸಾವಿರ ರೂ. ಕಡಿತ: ಗ್ರಾಹಕನಿಗೆ 2.24 ಲಕ್ಷ ರೂ. ಕೊಡಲು ಆದೇಶ; ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ ಭಾರಿ ದಂಡ

ಧಾರವಾಡ: ಎ.ಟಿ.ಎಮ್ ಹಣ ನಿರಾಕರಿಸಿದ ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ 2.24 ಲಕ್ಷ ರೂ.ಭಾರಿ ದಂಡ ವಿಧಿಸಲಾಗಿದೆ.

ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನ್ಸಾರಿ ಎಂಬುವವರು ಬಿಹಾರ ರಾಜ್ಯದ ಮುಝಫರಪುರ್ ಗೆ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಹೆಚ್.ಡಿ.ಎಫ್.ಸಿ. ಬ್ಯಾಂಕಿನ ಎ.ಟಿ.ಎಮ್ ನಲ್ಲಿ 10 ಸಾವಿರ ರೂ.ನಂತೆ ಎರಡು ಬಾರಿ ಹಣ ತೆಗೆಯಲು ತನ್ನ ಎಟಿಎಂ. ಕಾರ್ಡ್ ಬಳಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಸದರಿ ಎಟಿಎಂ ನಿಂದ ಹಣ ಬರದೇ ಇದ್ದರೂ ಅವರ ಉಳಿತಾಯ ಖಾತೆಯಿಂದ 20,000 ರೂ. ಡೆಬಿಟ್ ಆಗಿತ್ತು. ಈ ಬಗ್ಗೆ ದೂರುದಾರ ತನ್ನ ಉಳಿತಾಯ ಖಾತೆ ಇರುವ ಹುಬ್ಬಳ್ಳಿಯ ಅಂಚಟಗೇರಿಯ ಯುನಿಯನ್ ಬ್ಯಾಂಕ್‍ಗೆ ದೂರು ನೀಡಿ ಎಟಿಎಂ ತಪ್ಪನ್ನು ಸರಿಪಡಿಸಲು ಕೋರಿದ್ದರು. ಆ ದೂರಿನ ಆಧಾರದ ಮೇಲೆ ಯುನಿಯನ್ ಬ್ಯಾಂಕಿನವರು ಎಟಿಎಂ ದೋಷದಿಂದ ಬಾರದ 20,000 ರೂ.ಗಳನ್ನು ತಕ್ಷಣ ದೂರುದಾರರ ಖಾತೆಗೆ ಜಮಾ ಮಾಡುವಂತೆ ಹೆಚ್.ಡಿ.ಎಫ್.ಸಿ. ಬ್ಯಾಂಕ್‍ಗೆ ಪತ್ರ ವ್ಯವಹಾರ ಮಾಡಿದ್ದರು.

ಆದರೂ ಸದರಿ ಬ್ಯಾಂಕಿನವರು 20,000 ರೂ. ತನ್ನ ಖಾತೆಗೆ ಜಮಾ ಮಾಡಿಲ್ಲವಾದ್ದರಿಂದ ತನಗೆ ತೊಂದರೆಯಾಗಿ ಆ ಬ್ಯಾಂಕುಗಳಿಂದ ತನಗೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ   ಹೆಚ್.ಡಿ.ಎಫ್.ಸಿ. ಬ್ಯಾಂಕಿನ ಎಟಿಎಂ.ಯಂತ್ರದ ದೋಷದಿಂದ ದೂರುದಾರನಿಗೆ ಹಣ ಬಂದಿಲ್ಲ. ಕಾರಣ ಆ ಹಣ ಸದರಿ ಬ್ಯಾಂಕಿನಲ್ಲಿಯೇ ಉಳಿದಿತ್ತು.

ಈ ಬಗ್ಗೆ ಯುನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರು 2019ರಲ್ಲಿ ಎರಡು ಬಾರಿ ಎಫ್.ಟಿ.ಎಸ್. ಸೆಂಟರ್ ನಿಂದ ಹೆಚ್.ಡಿ.ಎಫ್.ಸಿ.ಬ್ಯಾಂಕ್‍ನವರನ್ನು ಸಂಪರ್ಕಿಸಿ ದೂರುದಾರನ ಹಣವನ್ನು ಅವನ ಖಾತೆಗೆ ಹಿಂದಿರುಗಿಸಲು ಕೋರಿದ್ದರು. ಆದರೂ ಹೆಚ್.ಡಿ.ಎಫ್.ಸಿ ಬ್ಯಾಂಕಿನವರು ಘಟನೆ ನಡೆದ ದಿ:17/01/2019 ರಿಂದ ಈ ವರೆಗೆ ಸುಮಾರು 4 ವರ್ಷ ದೂರುದಾರನ ಖಾತೆಗೆ ಹಣ ಜಮಾ ಮಾಡಿರಲಿಲ್ಲ. ಈ ರೀತಿ ಎಟಿಎಂ ದೋಷದಿಂದ ಹಣ ಬಾರದ ಪ್ರಸಂಗಗಳಲ್ಲಿ 6 ದಿವಸದೊಳಗಾಗಿ ಸಂಬಂಧಿಸಿದ ಬ್ಯಾಂಕಿನವರು ಕ್ರಮ ಕೈಗೊಂಡು ಗ್ರಾಹಕನ ಖಾತೆಗೆ ತಕ್ಷಣ ಹಣ ಜಮಾ ಮಾಡಬೇಕು. ತಪ್ಪಿದ್ದಲ್ಲಿ 7ನೇ ದಿನದಿಂದ ಜಮಾ ಆಗುವವರೆಗೆ ಪ್ರತಿ ದಿವಸ 100 ರೂ. ಪೆನಾಲ್ಟಿ ಕೊಡಬೇಕು ಎಂದು ಆರ್.ಬಿ.ಐ. ಸುತ್ತೋಲೆ ಇದ್ದರೂ ದಿ:17/01/2019 ರಿಂದ ಈವರೆಗೆ ಸುಮಾರು 4 ವರ್ಷಗಳ ಕಾಲ ಹಣ ದೂರುದಾರನ ಖಾತೆಗೆ ಜಮಾ ಮಾಡದೇ ಸದರಿ ಬ್ಯಾಂಕಿನ ಸಿಬ್ಬಂದಿ ಕರ್ತವ್ಯ ಲೋಪ ಎಸಗಿ ಸೇವಾ ನ್ಯೂನ್ಯತೆ ಮಾಡಿದ್ದಾರೆ ಎಂದು ತನ್ನ ತೀರ್ಪಿನಲ್ಲಿ ಜಿಲ್ಲಾ ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ.

ದಿ:17/01/2019 ರಂದು ಈ ಘಟನೆ ನಡೆದಿದ್ದು, ಅದು ಆದ 6 ದಿವಸದ ನಂತರ ದಿ:23/01/2019 ರಿಂದ ಈ ತೀರ್ಪು ನೀಡಿದ ದಿ:03/01/2023ರ ವರೆಗೆ 1441 ದಿವಸಕ್ಕೆ ಪ್ರತಿ ದಿವಸಕ್ಕೆ 100 ರೂ.ನಂತೆ ಲೆಕ್ಕ ಹಾಕಿ ಹೆಚ್.ಡಿ.ಎಫ್.ಸಿ. ಬ್ಯಾಂಕಿನವರು ದೂರುದಾರನಿಗೆ 1,44,100 ರೂ. ಪೆನಾಲ್ಟಿ, 20,000 ರೂ. ಎಟಿಎಂ ಹಣ ಮತ್ತು ದೂರುದಾರನಿಗೆ ಆಗಿರುವ ತೊಂದರೆ ಮತ್ತು ಮಾನಸಿಕ ಹಿಂಸೆಗೆ 50,000 ರೂ. ದಂಡ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಎಂದು 10,000 ರೂ. ಸೇರಿ ಒಟ್ಟು 2,24,100 ರೂ. ಗಳನ್ನು ಶೇ 8 ರಂತೆ ಬಡ್ಡಿ ಹಾಕಿ ನೀಡುವಂತೆ ಹೆಚ್.ಡಿ.ಎಫ್. ಸಿ ಬ್ಯಾಂಕಿಗೆ ಆಯೋಗ ಆದೇಶಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular