ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೊಸ ವರ್ಷದಂದು ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯೊಬ್ಬಳಿಗೆ ಕಾರು ಡಿಕ್ಕಿ ಹೊಡೆದು ಕಿಲೋಮೀಟರ್ ಗಟ್ಟಲೆ ದೂರ ಆಕೆಯ ದೇಹವನ್ನು ಎಳೆದುಕೊಂಡು ಹೋಗಲಾಗಿದ್ದ ಆಘಾತಕಾರಿ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಸೋಮವಾರ ಹಾಡಹಗಲೇ ಮತ್ತೊಂದು ಘೋರ ಕೃತ್ಯ ನಡೆದಿದೆ.
ಭಗ್ನ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದಿದ್ದು ಇದರ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸುಖ್ವಿಂದರ್ ಎಂಬಾತ ತನ್ನ ಮಾಜಿ ಪ್ರೇಮಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಚಾಕುವಿನಿಂದ ಇರಿದಿದ್ದು, ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರಿಬ್ಬರೂ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದು, ಆದರೆ ಇದಕ್ಕೆ ಯುವತಿ ಮನೆಯವರು ಒಪ್ಪಿರಲಿಲ್ಲವೆಂದು ಹೇಳಲಾಗಿದೆ. ಹೀಗಾಗಿ ಯುವತಿ, ಸುಖ್ವಿಂದರ್ ಭೇಟಿಯಾಗುವುದನ್ನು ತಪ್ಪಿಸುತ್ತಿದ್ದು, ಸೋಮವಾರ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ.