“ಆಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲಾ ಈಗ” 90 ರ ದಶಕದ ಸಿನೆಮಾ ಹಾಡಿದು. ಈಗ ಮಕ್ಕಳ್ಯಾರೂ ತೆರೆದ ಮೈದಾನದಲ್ಲಿ ಆಡುವುದೇ ವಿರಳ. ಅಪ್ಪ ಅಮ್ಮನ ಮುದ್ದಿನ ಕಣ್ಮಣಿಗಳು ಆದಷ್ಟು ತಮ್ಮ ಕಣ್ಣಳತೆಯ ದೂರದಲ್ಲೇ ಆಡಬೇಕೆಂಬ ಕಾಳಜಿ ಪೋಷಕರದ್ದು.
ಮನೆಯಲ್ಲೇ ಆಡುವ ಆಟಗಳಲ್ಲಿ ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗುವ ಆಟಿಕೆಗಳೆಂದರೆ ಫಝಲ್ ಗೇಮ್ಸ್. ಇದು ಸುರಕ್ಷಿತ ಹಾಗೂ ಬೌದ್ಧಿಕ ವಿಕಾಸಕ್ಕೆ ನೆರವಾಗುವ ಆಟಿಕೆ. ಮಾರುಕಟ್ಟೆಯಲ್ಲಿ ಹಲವು ಮಾದರಿಯ ಫಝಲ್ ಗೇಮ್ಸ್ ಗಳು ಲಭ್ಯವಿದ್ದು ಪೋಷಕರು ತಮ್ಮ ತಮ್ಮ ಮಕ್ಕಳ ವಯಸ್ಸು ಹಾಗೂ ಅಭಿರುಚಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು.
ಎರಡು ವರ್ಷದಿಂದ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಅವರವರ ಆಸಕ್ತಿಗೆ ಅನುಗುಣವಾಗಿ ಪ್ರಾಣಿ, ಪಕ್ಷಿ, ಹೂವು, ಹಣ್ಣು, ತರಕಾರಿ, ಕಾರ್ಟೂನ್ ಚಿತ್ರಗಳು ಹಾಗೂ ಥೀಂ ಆಧಾರಿತ ಫಝಲ್ ಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು. ಕನಿಷ್ಠ ಎರಡು ತುಂಡುಗಳ (ಹೋಳು) ಸರಳ ಜೋಡಣೆಯಿಂದ ಪ್ರಾರಂಭವಾಗಿ ನೂರಕ್ಕೂ ಹೆಚ್ಚು ಕ್ಲಿಷ್ಟಕರ ಹೋಳುಗಳ ಜೋಡಣೆ ಮಾಡಬಹುದಾದ ಫಝಲ್ಗಳಿದ್ದು ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಂಡುಕೊಳ್ಳಬಹುದು.
ಫಝಲ್ ಗಳ ನಿಯಮಿತ ಅಭ್ಯಾಸದಿಂದ ಮಕ್ಕಳಲ್ಲಿ ಏಕಾಗ್ರತೆ, ಚುರುಕುತನ, ಗ್ರಹಿಕೆಯ ಸಾಮರ್ಥ್ಯ ಹೆಚ್ಚುತ್ತದೆ. ಇಂದಿನ ಪೀಳಿಗೆಯವರಿಗೆ ತಾಳ್ಮೆಯೇ ಕಡಿಮೆ ಎಂಬ ಉದ್ಗಾರ ತೆಗೆಯುವ ಎಲ್ಲಾ ಪೋಷಕರು ತಮ್ಮ ಮಕ್ಕಳ ತಾಳ್ಮೆ ಹೆಚ್ಚಿಸುವ ಸಲುವಾಗಿ ಈ ಫಝಲ್ ಗೇಮ್ಸ್ ಗಳನ್ನು ಉಡುಗೊರೆಯಾಗಿ ಕೊಡಬಹುದು.