ಚಳಿಗಾಲ ಶುರುವಾಗಿರೋದ್ರಿಂದ ತರಹೇವಾರಿ ತರಕಾರಿಗಳು ಮಾರುಕಟ್ಟೆಗೆ ಬಂದಿವೆ. ಈ ಋತುವಿನಲ್ಲಿ ಸಿಗುವ ವಿಶಿಷ್ಟ ತರಕಾರಿಗಳನ್ನು ಸವಿಯಬೇಕು ಅನ್ನೋದು ಎಲ್ಲರ ಆಸೆ. ಪಾಲಕ್ ಸೊಪ್ಪು ಕೂಡ ಚಳಿಗಾಲದಲ್ಲಿ ಹೇರಳವಾಗಿ ಸಿಗುತ್ತದೆ. ಪಾಲಕ್ ಸೊಪ್ಪಿನಲ್ಲಿ ಪ್ರೋಟೀನ್, ಫೈಬರ್, ಎಂಟಿಒಕ್ಸಿಡೆಂಟ್ಗಳು ಮತ್ತು ಇತರ ಅನೇಕ ಪೌಷ್ಠಿಕಾಂಶಗಳಿವೆ. ಪಾಲಕ್ ಸೊಪ್ಪಿನಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಬಹುದು. ಅತ್ಯಂತ ಜನಪ್ರಿಯ ಖಾದ್ಯವೆಂದರೆ ಪಾಲಕ್ ಪನೀರ್. ರೊಟ್ಟಿ, ಪರೋಟ, ಚಪಾತಿ, ನಾನ್ ಜೊತೆಗೆ ನಾವು ಪಾಲಕ್ ಪನೀರ್ ಸವಿಯುತ್ತೇವೆ.
ಆದರೆ ಪಾಲಕ್ ಮತ್ತು ಪನೀರ್ ಅನ್ನು ಒಟ್ಟಿಗೆ ತಿನ್ನಬಾರದು ಅನ್ನೋದು ನಿಮಗೆ ತಿಳಿದಿದೆಯೇ? ಆಹಾರ ತಜ್ಞರ ಪ್ರಕಾರ ಪಾಲಕ್ ಮತ್ತು ಪನೀರ್ ಸಂಯೋಜನೆಯನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಅಚ್ಚರಿಯಾದ್ರೂ ಇದು ಸತ್ಯ ಸಂಗತಿ. ಆರೋಗ್ಯಕರ ಆಹಾರ ಎಂದರೆ ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವನೆ ಎಂದರ್ಥವಲ್ಲ. ಸರಿಯಾದ ಕಾಂಬಿನೇಶನ್ ಕೂಡ ಇರಬೇಕು. ಒಟ್ಟಿಗೆ ತಿಂದಾಗ ಪರಸ್ಪರ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುವ ಕೆಲವು ಆಹಾರ ಸಂಯೋಜನೆಗಳಿವೆ. ಅಂತಹ ಒಂದು ಸಂಯೋಜನೆ ಕ್ಯಾಲ್ಸಿಯಂ ಮತ್ತು ಕಬ್ಬಿಣದ್ದು. ಪನೀರ್ ಕ್ಯಾಲ್ಸಿಯಂನ ಉಗ್ರಾಣವಾಗಿದ್ದರೆ, ಪಾಲಕ್ ಕಬ್ಬಿಣದಲ್ಲಿ ಸಮೃದ್ಧವಾಗಿದೆ.
ಎರಡನ್ನೂ ಒಟ್ಟಿಗೆ ತಿಂದಾಗ ಪನೀರ್ನಲ್ಲಿರುವ ಕ್ಯಾಲ್ಸಿಯಂ ಪಾಲಕ್ನಲ್ಲಿರುವ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ನೀವು ಪಾಲಕ್ ಸೊಪ್ಪಿನ ಗರಿಷ್ಠ ಪ್ರಯೋಜನವನ್ನು ಪಡೆಯಲು ಬಯಸಿದರೆ, ಪಾಲಕ್ ಜೊತೆಗೆ ಆಲೂಗಡ್ಡೆ ಅಥವಾ ಕಾರ್ನ್ ಸೇರಿಸಿ ಭಕ್ಷ್ಯಗಳನ್ನು ತಯಾರಿಸಿ. ಆಯುರ್ವೇದದ ಪ್ರಕಾರ ಜೇನುತುಪ್ಪ ಮತ್ತು ತುಪ್ಪವನ್ನು ಸಮಾನ ಪ್ರಮಾಣದಲ್ಲಿ ಬೆರೆಸುವುದು ಸಹ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಲ್ಲದೇ ಕಲ್ಲಂಗಡಿ ಮತ್ತು ಹಾಲನ್ನು ಒಟ್ಟಿಗೆ ಸೇವಿಸಬಾರದು. ಕಲ್ಲಂಗಡಿ ಸ್ವಲ್ಪ ಹುಳಿ ಮತ್ತು ಹಾಲು ಸಿಹಿಯಾಗಿರುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಮಾಡುತ್ತದೆ.
ಚಿಕನ್ ಮತ್ತು ಆಲೂಗಡ್ಡೆಯನ್ನು ಒಟ್ಟಿಗೆ ತಿನ್ನುವುದನ್ನು ಸಹ ತಪ್ಪಿಸಬೇಕು. ಚಿಕನ್ ಪ್ರೋಟೀನ್ ಅನ್ನು ಹೊಂದಿರುತ್ತದೆ, ಆದರೆ ಆಲೂಗಡ್ಡೆ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಕಾರ್ಬೋಹೈಡ್ರೇಟ್ಗಳು ಇನ್ಸುಲಿನ್ ಹೆಚ್ಚಳಕ್ಕೆ ಕಾರಣವಾಗುತ್ತವೆ. ಆದ್ದರಿಂದಲೇ ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗುತ್ತದೆ.