ತೆಂಗಿನಕಾಯಿ ಆರೋಗ್ಯದ ಖಜಾನೆಯಿದ್ದಂತೆ. ಇದರಲ್ಲಿರೋ ಪ್ರಯೋಜನಗಳು ಹತ್ತಾರು. ಕೂದಲು ಮತ್ತು ಚರ್ಮದ ರಕ್ಷಣೆಯ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.
ತೆಂಗಿನಕಾಯಿ ಮಾತ್ರವಲ್ಲ, ಅದರ ಸಿಪ್ಪೆಯಲ್ಲಿರೋ ಆರೋಗ್ಯಕಾರಿ ಗುಣಲಕ್ಷಣಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ತೆಂಗಿನಕಾಯಿಯನ್ನು ಬಳಸಿ, ಅದರ ಸಿಪ್ಪೆಯನ್ನು ಬಿಸಾಡಬೇಡಿ. ಇದನ್ನು ಕೂಡ ಹಲವು ರೀತಿಯಲ್ಲಿ ಬಳಕೆ ಮಾಡಬಹುದು.
ಉರಿಯೂತಕ್ಕೆ ಮದ್ದು : ಗಾಯಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುತ್ತೇವೆ. ಪೆಟ್ಟು ಬಿದ್ದು ಊದಿಕೊಂಡ ಜಾಗಕ್ಕೂ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುತ್ತೇವೆ. ಅದೇ ರೀತಿ ತೆಂಗಿನ ಸಿಪ್ಪೆಯ ಪುಡಿ ಮಾಡಿ ಅದನ್ನು ಅರಿಶಿನದೊಂದಿಗೆ ಬೆರೆಸಿ ಉರಿಯೂತದ ಜಾಗಕ್ಕೆ ಹಚ್ಚಿದರೆ ಊತ ಕಡಿಮೆಯಾಗುತ್ತದೆ.
ಬಿಳಿ ಹಲ್ಲುಗಳಿಗಾಗಿ : ಹಳದಿ ಹಲ್ಲುಗಳ ಸಮಸ್ಯೆ ಸಾಮಾನ್ಯವಾಗಿದೆ. ತೆಂಗಿನ ಸಿಪ್ಪೆಯನ್ನು ಬಳಸಿ ಹಲ್ಲುಗಳ ಹಳದಿ ಬಣ್ಣವನ್ನು ಹೋಗಲಾಡಿಸಬಹುದು. ತೆಂಗಿನ ನಾರನ್ನು ಸುಟ್ಟು ಪುಡಿ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಸೋಡಾ ಬೆರೆಸಿ ಹಲ್ಲುಗಳ ಮೇಲೆ ಲಘುವಾಗಿ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ ಹಳದಿ ಹಲ್ಲು ಬೆಳ್ಳಗಾಗುತ್ತದೆ.
ಕೂದಲನ್ನು ಕಪ್ಪಾಗಿಸುತ್ತದೆ : ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನ ಸಿಪ್ಪೆಯನ್ನು ಸಹ ಬಳಸಲಾಗುತ್ತದೆ. ತೆಂಗಿನ ಸಿಪ್ಪೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ಪುಡಿ ಮಾಡಿ. ತೆಂಗಿನ ಎಣ್ಣೆಯಲ್ಲಿ ಈ ಪುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಈ ಪೇಸ್ಟ್ ಹಚ್ಚಿ ಒಂದು ಗಂಟೆಯ ನಂತರ ತಲೆ ತೊಳೆದುಕೊಳ್ಳಿ.
ಪೈಲ್ಸ್ ಸಮಸ್ಯೆಗೆ ಪರಿಹಾರ : ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿರುವವರು ತೆಂಗಿನ ಸಿಪ್ಪೆಯನ್ನು ಬಳಸಬಹುದು. ತೆಂಗಿನ ಸಿಪ್ಪೆಯನ್ನು ಸುಟ್ಟು ಪುಡಿ ಮಾಡಿ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಪುಡಿಯನ್ನು ನೀರಿನೊಂದಿಗೆ ಸೇವಿಸುವುದರಿಂದ ಪೈಲ್ಸ್ ಸಮಸ್ಯೆ ದೂರವಾಗುತ್ತದೆ. ತೆಂಗಿನ ಸಿಪ್ಪೆಯಲ್ಲಿರುವ ನಾರಿನಂಶವು ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ಮುಟ್ಟಿನ ನೋವಿಗೆ ಪರಿಹಾರ: ತೆಂಗಿನ ಸಿಪ್ಪೆಯು ಋತುಚಕ್ರದ ನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ತೆಂಗಿನ ಸಿಪ್ಪೆಯನ್ನು ಸುಟ್ಟು ಪುಡಿ ಮಾಡಿಕೊಳ್ಳಿ. ಇದನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಮುಟ್ಟಿನ ನೋವು ನಿವಾರಣೆಯಾಗುತ್ತದೆ. ನಿಮಗೆ ಅಲರ್ಜಿಯೇನಾದರೂ ಇದ್ದರೆ ತಕ್ಷಣ ಅದನ್ನು ಬಳಸುವುದನ್ನು ನಿಲ್ಲಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ.