ವಯಸ್ಸು 30 ದಾಟಿದ ಬಳಿಕ ಊಟ-ತಿಂಡಿಯ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಸಮಯಕ್ಕೂ ಮೊದಲೇ ವೃದ್ಧಾಪ್ಯ ಆವರಿಸಿಬಿಡುತ್ತದೆ. ಕೆಲವೊಂದು ಅಪಾಯಕಾರಿ ಕಾಯಿಲೆಗಳು ಕೂಡ ವಕ್ಕರಿಸಿಕೊಳ್ಳಬಹುದು.
30ರ ನಂತರ ನಮ್ಮ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತವೆ. ಆಯಾಸ, ಕೀಲು ನೋವು, ಮೈಕೈ ನೋವು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವಯಸ್ಸಿನಲ್ಲಿ ನಮ್ಮ ದೇಹವು ದುರ್ಬಲವಾಗಿಲ್ಲದಿದ್ದರೂ ಸೂಕ್ತವಾದ ಆಹಾರ ಸೇವನೆ ಅನಿವಾರ್ಯ. ಆಹಾರ ತಜ್ಞರ ಪ್ರಕಾರ 30 ವರ್ಷ ದಾಟಿದ ಮೇಲೆ ಕೆಲವೊಂದು ಆಹಾರ ಪದಾರ್ಥಗಳನ್ನು ತ್ಯಜಿಸಬೇಕು.
ಆಲೂಗಡ್ಡೆ ಚಿಪ್ಸ್ : ಆಲೂಗಡ್ಡೆ ಚಿಪ್ಸ್ ಎಲ್ಲರಿಗೂ ಫೇವರಿಟ್. ಅದರ ರುಚಿ ಎಂಥವರನ್ನೂ ಸೆಳೆಯುತ್ತದೆ. ಆದರೆ ಆಲೂಗಡ್ಡೆ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ. 30 ವರ್ಷ ದಾಟಿದ ಬಳಿಕ ಆಲೂಗಡ್ಡೆ ಚಿಪ್ಸ್ ಸೇವನೆಯನ್ನು ಬಿಟ್ಟುಬಿಡಿ. ಏಕೆಂದರೆ ಚಿಪ್ಸ್ ತಯಾರಿಕೆಯಲ್ಲಿ ಸಿಂಥೆಟಿಕ್ ವಸ್ತುಗಳನ್ನು ಸೇರಿಸಲಾಗುತ್ತದೆ. ಜೊತೆಗೆ ಅದರಲ್ಲಿ ಸೋಡಿಯಂ ಅಂಶವು ಅಧಿಕವಾಗಿದ್ದು ಅದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
ಸುವಾಸನೆಯ ಮೊಸರು : ಮೊಸರು ತಿನ್ನುವುದರಿಂದ ನಮ್ಮ ನಮ್ಮ ದೇಹಕ್ಕೆ ತುಂಬಾ ಪ್ರಯೋಜನವಿದೆ. ಇದು ದೇಹಕ್ಕೆ ತಂಪು ನೀಡುವುದಲ್ಲದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸುವಾಸನೆಯ ಮೊಸರನ್ನು ಸೇವಿಸುವುದು ಸೂಕ್ತವಲ್ಲ. 30 ವರ್ಷ ದಾಟಿದ ಮೇಲೆ ನೀವು ಇದನ್ನು ಅವಾಯ್ಡ್ ಮಾಡಬೇಕು. ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಮಧುಮೇಹ ಮತ್ತು ಸ್ಥೂಲಕಾಯತೆಯ ಅಪಾಯವು ಹೆಚ್ಚಾಗುತ್ತದೆ.
ಪಾಪ್ ಕಾರ್ನ್: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ನೋಡುವಾಗ, ಮನೆಯಲ್ಲಿ ಕುಳಿತು ಟಿವಿ ನೋಡುವಾಗ ಎಲ್ಲರೂ ಪಾಪ್‌ಕಾರ್ನ್ ತಿನ್ನಲು ಇಷ್ಟಪಡುತ್ತಾರೆ. ಆರೋಗ್ಯಕರ ರೀತಿಯಲ್ಲಿ ತಯಾರಿಸಿದರೆ ಇದನ್ನು ತಿನ್ನುವುದರಿಂದ ಯಾವುದೇ ಅಪಾಯವಿಲ್ಲ. ಆದರೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಪಾಪ್‌ಕಾರ್ನ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಬಳಸಲಾಗುತ್ತದೆ. ಇದನ್ನು ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.